ಮೊದಲು ಬ್ಯಾಲೆಟ್ ಪೇಪರ್ ನಂತರ ಇವಿಎಂ ಮತ ಎಣಿಕೆ: ಚುನಾವಣಾಧಿಕಾರಿ

ಬೆಂಗಳೂರು, ಮೇ 12: ಬೆಂಗಳೂರು ನಗರದ ನಾಲ್ಕು ಕೇಂದ್ರಗಳಲ್ಲಿ 28 ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಾಳೆ(ಮೇ 13) ನಡೆಯಲಿದ್ದು, ಮೊದಲು ಬ್ಯಾಲೆಟ್ ಹಾಗೂ ಅಂಚೆ ಮತಗಳನ್ನು ಎಣಿಸಿ ನಂತರ ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಮತಗಳನ್ನು ಎಣಿಕೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಫಲಿತಾಂಶವು ನಾಳೆ(ಮೇ13) ಪ್ರಕಟವಾಗಲಿದ್ದು, 28 ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಾಲ್ಕು ಕೇಂದ್ರಗಳಲ್ಲಿ ನಡೆಯಲಿದೆ. ದಿಲ್ಲಿಯಿಂದ ಕೇಂದ್ರ ಚುನಾವಣಾ ಆಯೋಗದ 14 ಮಂದಿ ವೀಕ್ಷಕರು ನಗರಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಮತ ಎಣಿಕೆಯ ಅಪ್‍ಡೇಟ್‍ಗಳನ್ನು ಸಾರ್ವಜನಿಕರು ಚುನಾವಣಾ ಆಯೋಗದ ವೆಬ್‍ಸೈಟ್‍ಗೆ ಲಾಗ್ ಇನ್ ಮಾಡುವ ಮೂಲಕ ಎಣಿಕೆಯ ಲೈವ್ ವೆಬ್‍ಕಾಸ್ಟಿಂಗ್ ಅನ್ನು ವೀಕ್ಷಿಸಬಹುದು. ಸುಮಾರು 18 ಸಾವಿರದಿಂದ 20 ಸಾವಿರ ಅಂಚೆ ಮತಪತ್ರಗಳಿವೆ. ಬ್ಯಾಲೆಟ್ ಪೇಪರ್‍ಗಳು ಮತ್ತು ಅಂಚೆ ಮತಗಳನ್ನು ಲೆಕ್ಕ ಹಾಕಲು 3 ಟೇಬಲ್‍ಗಳನ್ನು ಇಡಲಾಗಿದೆ ಎಂದರು.
ನಾಲ್ಕು ಕೇಂದ್ರಗಳಲ್ಲಿ ಎಣಿಕೆಗಾಗಿ 450 ಟೇಬಲ್‍ಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆಗೆ ಸುಮಾರು 4,000 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಟೇಬಲ್‍ಗಳಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅರೆಸೇನಾ ಪಡೆ ಮತ್ತು ಪೊಲೀಸ್ ರಕ್ಷಣೆ ಸೇರಿದಂತೆ ಮತ ಎಣಿಕೆ ಕೇಂದ್ರಗಳಿಗೆ ಮೂರು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ನಾಲ್ಕು ಮತ ಎಣಿಕೆ ಕೇಂದ್ರಗಳು: ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಕಾಂಪೋಸಿಟ್ ಪಿಯು ಕಾಲೇಜು, ಅರಮನೆ ರಸ್ತೆಯ ಮೌಂಟ್ ಕಾರ್ಮೆಲ್ ಕಾಲೇಜು, ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜು ಹಾಗೂ ಜಯನಗರದ ಎಸ್‍ಎಸ್‍ಎಂಆರ್‍ವಿ ಪಿಯು ಕಾಲೇಜು ಈ ನಾಲ್ಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಮತ ಎಣಿಕೆ ಕೇಂದ್ರದ ಸುತ್ತ ನಿಬರ್ಂಧ ವಿಧಿಸಿದ್ದಾರೆ.
ಸಂಚಾರ ನಿರ್ಬಂಧ-ಪರ್ಯಾಯ ವ್ಯವಸ್ಥೆ: ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಕಾಂಪೋಸಿಟ್ ಪಿಯು ಕಾಲೇಜು ಮತ ಎಣಿಕೆ ಕೇಂದ್ರದ ಬಳಿ ಸಿದ್ದಲಿಂಗಯ್ಯ ವೃತ್ತದಿಂದ ಆರ್‍ಆರ್‍ಎಂಆರ್ ಮತ್ತು ಕಸ್ತೂರಿ ಬಾ ರಸ್ತೆ, ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಹಾಗೆಯೇ ಆರ್‍ಆರ್‍ಎಂಆರ್ ರಸ್ತೆ ಮತ್ತು ಕಸ್ತೂರಿ ಬಾ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.