ಮಣಿಪುರ ಜನಾಂಗೀಯ ಹಿಂಸಾಚಾರ: ಪ್ರತ್ಯೇಕ ರಾಜ್ಯಕ್ಕಾಗಿ 10 ಬುಡಕಟ್ಟು ಶಾಸಕರ ಆಗ್ರಹ

ಇಂಫಾಲ್,ಮೇ 12: ಇತ್ತೀಚಿನ ದಿನಗಳಲ್ಲಿ ಮಣಿಪುರದಲ್ಲಿ ವ್ಯಾಪಕ ಜನಾಂಗೀಯ ಹಿಂಸಾಚಾರಗಳ ಬಳಿಕ 10 ಬುಡಕಟ್ಟು ಶಾಸಕರು ಆದಿವಾಸಿಗಳಿಗಾಗಿ ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿದ್ದಾರೆ.
ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಶಾಸಕರು ತಮ್ಮ ಬೇಡಿಕೆಗೆ ಸಾಂವಿಧಾನಿಕ ಪರಿಹಾರವನ್ನು ಕೋರಿ ಶುಕ್ರವಾರ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ನೇತೃತ್ವದ ಮಣಿಪುರ ಸರಕಾರವು ರಾಜ್ಯದಲ್ಲಿಯ ಹಿಂಸಾಚಾರಕ್ಕೆ ಪರೋಕ್ಷ ಬೆಂಬಲವನ್ನು ನೀಡುತ್ತಿದೆ ಎಂದು ಈ ಶಾಸಕರು ಆರೋಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಣಿಪುರವು ರಾಜ್ಯದ ಮೈತೀ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ವ್ಯಾಪಕ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಕನಿಷ್ಠ 60 ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಸಾವಿರಾರು ಸೇನಾ ಮತ್ತು ಅರೆಸೇನಾ ಪಡೆ ಸಿಬ್ಬಂದಿಗಳನ್ನು ರಾಜ್ಯಾದ್ಯಂತ ನಿಯೋಜಿಸಿದ ಬಳಿಕ ಹಿಂಸಾಚಾರವು ನಿಯಂತ್ರಣದಲ್ಲಿದೆ.
ಬಹುಸಂಖ್ಯಾತ ಮೈತೀಗಳು ಮೇ 3ರಿಂದ ಆನ್-ಕುಕಿ-ಮಿರೆ-ರೆಮಿ ಗುಡ್ಡಗಾಡು ಆದಿವಾಸಿಗಳ ವಿರುದ್ಧ ನಡೆಸಿದ್ದ ಹಿಂಸಾಚಾರವನ್ನು ರಾಜ್ಯ ಸರಕಾರವು ಪರೋಕ್ಷವಾಗಿ ಬೆಂಬಲಿಸಿತ್ತು. ಈ ಹಿಂಸಾಚಾರವು ಈಗಾಗಲೇ ರಾಜ್ಯವನ್ನು ವಿಭಜಿಸಿದೆ ಮತ್ತು ಮಣಿಪುರ ರಾಜ್ಯದಿಂದ ಸಂಪೂರ್ಣ ಪ್ರತ್ಯೇಕತೆಯನ್ನು ಅನಿವಾರ್ಯವಾಗಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಶಾಸಕರು,ಆದಿವಾಸಿಗಳು ಇನ್ನು ಮುಂದೆ ಮಣಿಪುರದಲ್ಲಿ ವಾಸವಾಗಿರಲು ಸಾಧ್ಯವಿಲ್ಲ ಮತ್ತು ಭಾರತೀಯ ಸಂವಿಧಾನದಡಿ ಪ್ರತ್ಯೇಕ ಆಡಳಿತವನ್ನು ಬಯಸಿದ್ದಾರೆ ಎಂದು ಹೇಳಿದ್ದಾರೆ.
‘ನಮ್ಮ ಜನರ ಚುನಾಯಿತ ಪ್ರತಿನಿಧಿಗಳಾಗಿ ನಾವಿಂದು ನಮ್ಮ ಜನರ ಭಾವನೆಗಳನ್ನು ಪ್ರತಿನಿಧಿಸುತ್ತಿದ್ದೇವೆ ಮತ್ತು ಮಣಿಪುರ ರಾಜ್ಯದಿಂದ ಪ್ರತ್ಯೇಕಗೊಳ್ಳಬೇಕೆಂಬ ಅವರ ರಾಜಕೀಯ ಆಕಾಂಕ್ಷೆಯನ್ನು ಅನುಮೋದಿಸುತ್ತೇವೆ. ಸಂವಿಧಾನದಡಿ ಭಾರತ ಒಕ್ಕೂಟದಿಂದ ಪ್ರತ್ಯೇಕ ಆಡಳಿತವನ್ನು ಮತ್ತು ಮಣಿಪುರ ರಾಜ್ಯದೊಂದಿಗೆ ನೆರೆಕರೆಯವರಾಗಿ ಶಾಂತಿಯಿಂದ ಬದುಕಲು ಬಯಸಿದ್ದೇವೆ ’ಎಂದು ಈ ಶಾಸಕರು ತಿಳಿಸಿದ್ದಾರೆ.







