ಕಣಚೂರು ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

ಕೊಣಾಜೆ: ರೋಗಿಗಳ ಜತೆಗಿನ ನಂಬಿಕೆಯ ಸಂಬಂಧ, ಶುಶ್ರೂಷೆಯ ಕಲೆ, ಫಲಿತಾಂಶದ ಕ್ರಮಗಳು, ಸಹಾನುಭೂತಿಯ ಆಲಿಸುವಿಕೆ, ಉತ್ತಮ ಕಲಿಕೆಯ ಗುಣಗಳನ್ನು ದಾದಿಯರು ಮೈಗೂಡಿಸಿಕೊಂಡಾಗ ಕರ್ತವ್ಯ ದಲ್ಲಿ ಯಶಸ್ಸಿನೊಂದಿಗೆ ಆಸ್ಪತ್ರೆಯ ಹೆಸರನ್ನು ಬೆಳಗಿಸಲು ಸಾಧ್ಯ ಎಂದು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಇದರ ಕ್ಲಿನಿಕಲ್ ಕಾರ್ಡಿನೇಟರ್ ಡಾ.ಜೆಸಿಂತಾ ವೇಗಸ್ ಅಭಿಪ್ರಾಯಪಟ್ಟರು.
ಅವರು ನಾಟೆಕಲ್ ನ ಕಣಚೂರು ನರ್ಸಿಂಗ್ ವಿಜ್ಞಾನ ಕಾಲೇಜು ವತಿಯಿಂದ ಕಣಚೂರು ಆಸ್ಪತ್ರೆ ಆಡಿಟೋರಿ ಯಂನಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜನ ದಾದಿಯರನ್ನು ಅಪರೂಪದ ವೃತ್ತಿಧರ್ಮದವರು ಹಾಗೂ ದೇವರಂತೆ ಕಾಣುತ್ತಾರೆ. ಕೋವಿಡ್ ಸಂದರ್ಭ ದಾದಿಯರ ಸೇವೆ ಮಾನವ ಜಗತ್ತು ಒಪ್ಪಿಕೊಳ್ಳುವುದರ ಜೊತೆಗೆ ಕೊಂಡಾಡಿತ್ತು. ರೋಗಿಗಳೊಂದಿಗೆ ವಿಶ್ವಾಸ ಗಳಿಸುವುದು ದಾದಿಯರ ಕಲೆಯಾಗಿದೆ. ಸನ್ನಿವೇಶ, ಸಾಮಾಜಿಕ ಅಗತ್ಯಗಳನ್ನು ಮನಗಂಡು ನಾವೀನ್ಯತೆಗೆ ಒಗ್ಗಿಕೊಂಡು ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಹಿಂದಿನ ಸಿರಿವಂತ ಸಂಪ್ರದಾಯಗಳನ್ನು ಅಡಿಪಾಯವಾಗಿರಿಸಿ ದಾದಿಯರ ತರಬೇತುದಾರರು ಕಾರ್ಯನಿರ್ವಹಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ, ಜಾತಿ ಧರ್ಮ ಮತಗಳ ಆಧಾರದಲ್ಲಿ ದಾದಿಯರನ್ನು ಜನ ಪ್ರೀತಿಸುತ್ತಿಲ್ಲ. ಅವರ ನಿಸ್ವಾರ್ಥ ಸೇವೆ ಗಳನ್ನು ಪ್ರೀತಿಸಲಾಗುತ್ತಿದೆ. ದಾದಿಯರ ಸೇವೆಯಿಂದ ವೈದ್ಯರ ಕರ್ತವ್ಯ ಪರಿಪೂರ್ಣವಾಗುವುದು. ಮಹಾನ್ ಸೇವಕಿ ಫ್ಲೋರೆನ್ಸ್ ನೈಟಿಂಗೇಲ್ ಹೆಸರಿನಲ್ಲಿ ದಾದಿಯರನ್ನು ಸ್ಮರಿಸುವ ಒಂದು ದಿನದ ಕಾರ್ಯ ಮಹತ್ವ ಹೊಂದಿದೆ ಎಂದರು.
ಈ ಸಂದರ್ಭ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್, ವೈದ್ಯಕೀಯ ಕಾಲೇಜು ಡೀನ್ ಡಾ.ರತ್ನಾಕರ್, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಕಣಚೂರು ನರ್ಸಿಂಗ್ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಪ್ರೊ. ಮೋಲಿ ಸಲ್ದಾನ್ಹ, ನರ್ಸಿಂಗ್ ವಿಭಾಗದ ಅಧೀಕ್ಷಕಿ ಶೈಲಾ ಶ್ರೀಧರ್ ಮತ್ತು ಶಮೀನಾ ಉಪಸ್ಥಿತರಿದ್ದರು.
ಈ ಸಂದರ್ಭ ಸ್ಪರ್ಧೆಗಳಲ್ಲಿ ವಿಜೇತರಾದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.







