ಬೆಂಗಳೂರು ನಗರದ 5 ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ; ಸಂಭ್ರಮಾಚರಣೆ ಮಾಡುವಂತಿಲ್ಲ

ಬೆಂಗಳೂರು, ಮೇ 12: ಬೆಂಗಳೂರು ನಗರ ವ್ಯಾಪ್ತಿಯ 28 ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಾಳೆ (ಮೇ 13) ಬೆಳಗ್ಗೆ 8ಗಂಟೆಯಿಂದ ಆರಂಭವಾಗಲಿದ್ದು, ಐದು ಮತ ಎಣಿಕೆ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ, ಈ ಅವಧಿಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕೆ.ಆರ್.ಪುರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞ ನಗರ ಹಾಗೂ ಸಿ.ವಿ.ರಾಮನ್ ನಗರ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆಯಲಿದ್ದು, ಪೂರ್ವ ಹಾಗೂ ಕೇಂದ್ರ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ.
ಆನೇಕಲ್, ಬೆಂಗಳೂರು ದಕ್ಷಿಣ ಮಹದೇವಪುರ, ಬ್ಯಾಟರಾಯನಪುರ ಯಲಹಂಕ ಹಾಗೂ ದಾಸರಹಳ್ಳಿ ಕ್ಷೇತ್ರಗಳ ಮತ ಎಣಿಕೆ ನಗರದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‍ನಲ್ಲಿ ನಡೆಯಲಿದ್ದು, ಸಿಸಿಬಿಯ ಅಪರಾಧ ವಿಭಾಗದ ಡಿಸಿಪಿ ಹಾಗೂ ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.
ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಆರ್.ಆರ್.ನಗರ ಹಾಗೂ ಶಿವಾಜಿನಗರ ಕ್ಷೇತ್ರಗಳ ಮತ ಎಣಿಕೆಯು ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆಯಲಿದ್ದು, ದಕ್ಷಿಣ ವಿಭಾಗದ ಡಿಸಿಪಿ ಹಾಗೂ ಕಮ್ಯಾಂಡ್ ಸೆಂಟರ್ ಡಿಸಿಪಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಪದ್ಮನಾಭನಗರ, ಗೋವಿಂದರಾಜ ನಗರ ವಿಜಯನಗರ, ಜಯನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಹಾಗೂ ಬಸವನಗುಡಿ ಕ್ಷೇತ್ರಗಳ ಮತ ಎಣಿಕೆ ಕಾರ್ಯ ತಿಲಕ್ ನಗರದ ಎಸ್‍ಎಸ್‍ಎಂಆರ್‍ವಿ ಕಾಲೇಜಿನಲ್ಲಿ ನಡೆಯಲಿದ್ದು ಆಗ್ನೇಯ ವಿಭಾಗದ ಡಿಸಿಪಿ ಹಾಗೂ ಸಿಎಆರ್ ದಕ್ಷಿಣ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಇರಲಿದೆ.
ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಕ್ಷೇತ್ರಗಳ ಮತ ಎಣಿಕೆಯು ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ನಡೆಯಲಿದ್ದು, ಈಶಾನ್ಯ ವಿಭಾಗದ ಡಿಸಿಪಿ ಹಾಗೂ ವಿವಿಐಪಿ ಭದ್ರತಾ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಉಸ್ತುವಾರಿ ವಹಿಸಲಾಗಿದೆ ಎಂದು ತಿಳಿಸಲಾಗಿದೆ.
ಮತ ಎಣಿಕೆ ಹಾಗೂ ಫಲಿತಾಂಶದ ಬಳಿಕವೂ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮೇ 14ರ ಬೆಳಗ್ಗೆಯ ವರೆಗೆ ಸಶಸ್ತ್ರ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಕ್ರಮ ವಹಿಸಲಾಗಿದೆ. ಪೂರ್ವ ಹಾಗೂ ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ 10 ಮಂದಿ ಡಿಸಿಪಿ, 15 ಮಂದಿ ಎಸಿಪಿ, 38 ಪೊಲೀಸ್ ಇನ್ಸ್ ಪೆಕ್ಟರ್, 250 ಪಿಎಸ್‍ಐ 1200 ಸಿಬ್ಬಂದಿ ಜೊತೆಗೆ 12 ಕೇಂದ್ರಿಯ ಸಿಎಪಿಎಫ್, ತುಕಡಿ, 36 ಕೆಎಸ್‍ಆರ್‍ಪಿ, ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.