ಪಿಎಫ್ಐಯೊಂದಿಗೆ ನಂಟು ನಿರಾಕರಿಸಿದ ಮಾನವ ಹಕ್ಕು ಹೋರಾಟಗಾರ ಮುಹಮ್ಮದ್ ಶುಐಬ್

ಲಕ್ನೋ, ಮೇ 12: ಉತ್ತರಪ್ರದೇಶದ ಭಯೋತ್ಪಾದನೆ ನಿಗ್ರಹ ದಳದಿಂದ ಮೇ 7ರಂದು ವಿಚಾರಣೆಗೆ ಒಳಗಾದ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲ ಮುಹಮ್ಮದ್ ಶುಐಬ್, ನಿಷೇಧಿತ ಪಿಎಫ್ಐ ಸಂಘಟನೆಯೊಂದಿಗೆ ಯಾವುದೇ ರೀತಿಯ ನಂಟು ಹೊಂದಿಲ್ಲ ಎಂದಿದ್ದಾರೆ.
ರಿಹಾಯಿ ಮಂಚ್ ಹೆಸರಿನ ಸಂಘಟನೆಯ ಸಂಸ್ಥಾಪಕರಾಗಿರುವ ಶುಐಬ್ ಅವರನ್ನು ಲಕ್ನೋದಲ್ಲಿರುವ ಅವರ ಮನೆಯಿಂದ ಮೇ 7ರಂದು ಬೆಳಗ್ಗೆ ಉತ್ತರಪ್ರದೇಶದ ಎಟಿಎಸ್ ವಶಕ್ಕೆ ತೆಗೆದುಕೊಂಡಿತ್ತು.
ನಗರದ ಅಮಿನಾಬಾದ್ ಪೊಲೀಸ್ ಠಾಣೆಗೆ ತನ್ನನ್ನು ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ಹೇಳಿದ್ದರು. ಆದರೆ, ಅಲ್ಲಿಗೆ ಕರೆದೊಯ್ಯುವ ಬದಲು ಎಟಿಎಸ್ ನ ಕೇಂದ್ರ ಕಚೇರಿಗೆ ಕರೆದೊಯ್ದರು. ಅದೇ ದಿನ ರಾತ್ರಿ ಸುಮಾರು 10 ಗಂಟೆಗೆ ತನ್ನನ್ನು ಬಿಡುಗಡೆ ಮಾಡಿದರು ಎಂದು ಶುಐಬ್ ತಿಳಿಸಿದ್ದಾರೆ.
ಪಿಎಫ್ಐಯೊಂದಿಗೆ ಯಾವುದೇ ನಂಟು ಇದೆಯೇ ಎಂದು ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಪ್ರಶ್ನಿಸಿದರು. ಆದರೆ, ತಾನು ಪಿಎಫ್ಐಯೊಂದಿಗೆ ಯಾವುದೇ ನಂಟು ಹೊಂದಿಲ್ಲ. ತಾನು ಪಿಎಫ್ಐಯ ಯಾವುದೇ ಸಭೆಗೆ ಹಾಜರಾಗಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಮಕ್ತೂಬ್ ಮೀಡಿಯಾ ತಿಳಿಸಿದೆ.
ಲಕ್ನೋದಲ್ಲಿ 2011ರಲ್ಲಿ ನಡೆದ ಪಿಎಫ್ಐಯ ಸಾರ್ವಜನಿಕ ಸಭೆಯಲ್ಲಿ ತಾನು ಭಾಷಣ ಮಾಡಿದ್ದೆ. ಅದು ಬಿಟ್ಟು, ತಾನು ಬೇರೇನನ್ನೂ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ವಿಚಾರಣೆಯ ಬಳಿಕ ಎಟಿಎಸ್ನ ಅಧಿಕಾರಿಗಳು ತನ್ನನ್ನು ಮನೆಗೆ ಹಿಂದೆ ಕರೆದುಕೊಂಡು ಬಂದು ಬಿಟ್ಟರು. ಆದರೆ, ತನಗೆ ಯಾವುದೇ ರೀತಿಯ ಹಾನಿ ಉಂಟು ಮಾಡಿಲ್ಲ ಎಂದು ಅವರು ತನ್ನ ಪತ್ನಿಯಿಂದ ಪತ್ರ ಬರೆಸಿಕೊಂಡರು ಎಂದು ಮುಹಮ್ಮದ್ ಶುಐಬ್ ಅವರು ಹೇಳಿದ್ದಾರೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.







