ಬೆಂಗಳೂರು | ದಲಿತರಿಬ್ಬರ ಕೊಲೆಗೆ ಖಂಡನೆ; ಆರೋಪಿಗಳನ್ನು ಬಂಧಿಸಿ, ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
ಬೆಂಗಳೂರು, ಮೇ 12: ‘ಕ್ಷುಲ್ಲಕ ವಿಚಾರಕ್ಕೆ ರಾಜಾನಕುಂಟೆ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಮೇ 11ರಂದು ಸವರ್ಣೀಯರಿಂದ ದಲಿತ ಯುವಕರಿಬ್ಬರ ಕೊಲೆ ಮಾಡಲಾಗಿದ್ದು, ಇದು ಖಂಡನೀಯ. ತುರ್ತಾಗಿ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು’ ಎಂದು ಬಹುತ್ವ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಶುಕ್ರವಾರ ಮಾಧ್ಯಮ ಪ್ರಕಟನೆ ನೀಡಿರುವ ಸಂಘಟನೆ, ಹೋಟೆಲ್‍ವೊಂದರಲ್ಲಿ ನೀರು ಕುಡಿದ ವಿಚಾರಕ್ಕೆ ನಡೆದ ಗಲಾಟೆಯನ್ನೇ ಮುಂದಿಟ್ಟುಕೊಂಡು ಸವರ್ಣೀಯ ಸಮುದಾಯಗಳಿಗೆ ಸೇರಿದ ಭರತ್, ವಿನಯ್ ಹಾಗು ನಿಶಾಂತ್ ಎಂಬುವವರು ತಮ್ಮ ಕಾರನ್ನು ಅತಿವೇಗವಾಗಿ ಓಡಿಸಿ, ರಾಮಯ್ಯ, ಗೋಪಾಲ್ ಹಾಗು ನಾಗರಾಜು ಅವರು ಇದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ರಾಮಯ್ಯ ಹಾಗು ನಾಗರಾಜು ಅವರ ಸಾವಿಗೆ ಕಾರಣರಾಗಿದ್ದಾರೆ. ಇನ್ನು ಘಟನೆಯಲ್ಲಿ ಗೋಪಾಲ್ ಗಾಯಗೊಂಡಿದ್ದು, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಸಂಘಟನೆ ದೂರಿದೆ.
ಮೃತರ ಕುಟುಂಬಕ್ಕೆ ಸರಕಾರದಿಂದ 50 ಲಕ್ಷ ರೂ.ಪರಿಹಾರ, ಹಾಗೂ ಪುನರ್ವಸತಿಗೆ ಜಮೀನು, ಉದ್ಯೋಗ ಸೇರಿ ಕಾನೂನಾಧರಿತ ಸೌಲಭ್ಯಗಳನ್ನೆಲ್ಲಾ ನೀಡಬೇಕು. ಗಾಯಗೊಂಡ ಗೋಪಾಲರವರ ಸಂಪೂರ್ಣ ಚಿಕತ್ಸೆ ವೆಚ್ಚವನ್ನು ಸರಕಾರವೇ ಭರಿಸಬೇಕು. ಅಲ್ಲದೆ ಅವರಿಗೂ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಮುಂಬರುವ ಸರಕಾರ ಅಸ್ಪೃಶ್ಯತೆಯ ವಿರುದ್ಧ ಹಾಗು ಜಾತಿವಾದಿ ಅಪರಾಧಗಳ ವಿರುದ್ಧ ಪರಿಣಾಮಕಾರಿ, ಪಾರದರ್ಶಕ ಹಾಗು ತುರ್ತು ಕ್ರಮ ತೆಗೆದುಕೊಳ್ಳಬೇಕು. ಸವರ್ಣೀಯ ಸಮುದಾಯದ ಮಠಾಧೀಶರು, ಅಸ್ಪøಶ್ಯತೆಯನ್ನು ತೊಲಗಿಸುವಂತೆ ಅವರ ಸಮುದಾಯಗಳಿಗೆ ಕರೆ ನೀಡಬೇಕು ಎಂದು ಸಂಘಟನೆ ತಿಳಿಸಿದೆ.
ಈ ಭೀಕರ ಕೊಲೆ ಅಸ್ಪøಷ್ಯತೆಯ ಹಿಂದಿನ ಹುನ್ನಾರ. ಸುಮಾರು 20 ದಿವಸದ ಕೆಳಗೆ ಹೆಸರುಘಟ್ಟದ ಹೋಟೆಲ್‍ನಲ್ಲಿ ನಾಗರಾಜು ಅವರು ನೀರು ಕುಡಿಯಬೇಕಾದರೆ, ಭರತ್ ಎಂಬಾತನು ಬಂದು ಜಾತಿ ನಿಂದನೆಗಳನ್ನು ಮಾಡಿ, ನಾಗರಾಜು ಅವರಿಗೆ ಅವಮಾನಿಸಿ, ಚುನಾವಣೆಯ ನಂತರ ಅವರ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಅದ ಪರಿಣಾಮವಾಗಿ ಇಬ್ಬರು ದಲಿತರನ್ನು ಕೊಲೆಗೈಯ್ಯಲಾಗಿದೆ. ದಲಿತ ಸಮುದಾಯದವರಾಗಲೀ ಇನ್ನು ಯಾರೇ ಆಗಲಿ, ಸಾರ್ವಜನಿಕ ಸ್ಥಳದಲ್ಲಿ ನೀರು ಕುಡಿಯುವುದು ತಪ್ಪೆಂದು ಹೇಳುವುದು ಕಾನೂನುಬಾಹಿರ ಮಾತ್ರವಲ್ಲ, ತೀರ ಅಮಾನವೀಯವೂ ಎಂದು ಸಂಘಟನೆ ತಿಳಿಸಿದೆ.
ಕೆಲವು ತಿಂಗಳ ಹಿಂದೆ ಕೋಲಾರದಲ್ಲಿ ಬೈಕ್ ಅಲ್ಲಿ ಸವರ್ಣೀಯರನ್ನು ಓವರ್ ಟೇಕ್ ಮಾಡಿದ್ದ ಕಾರಣ ಉದಯ್ ಕಿರಣ್ ಅವರನ್ನು ಮರಕ್ಕೆ ಕಟ್ಟಿ, ಥಳಿಸಿ, ಅವಮಾನಿಸಿ ಕೊಲ್ಲಲಾಯಿತು. ಈಗ ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂವಿಧಾನದ ಅನುಚ್ಚೇಧ 17 ಅಸ್ಪೃಶ್ಯತೆಯನ್ನು ನಿಷೇಧಿಸಿ ಅಪರಾಧವೆಂದು ಹೇಳುತ್ತದೆ. ಅನುಚ್ಚೇಧ 15(2) ಯಾರಿಗೂ ಜಾತಿ, ಧರ್ಮ, ಲಿಂಗ, ಭಾಷೆ ಮೊದಲಾದ ಯಾವುದೇ ಅಸ್ಮಿತೆಯ ಆಧಾರದ ಮೇಲೆ ಸಾರ್ವಜನಿಕ ಸ್ಥಳಗಳಿಗೆ ನಿಷೇಧ ಮಾಡಬಾರದೆಂದು ತಿಳಿದಿದೆ. ಆದರೂ ಈ ರೀತಿಯ ಘಟನೆಗಳು ನಿರಂತರ ನಡೆಯುತ್ತಿವೆಯೆಂದರೆ ಸವರ್ಣೀಯ ಸಮುದಾಯಗಳ ಬಹುತೇಕರಲ್ಲಿ ಇನ್ನೂ ಮನುಸ್ಮೃತಿಯೆ ತುಂಬಿದೆ ಎಂಬುದು ಖಚಿತವಾಗಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.