ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಬಗ್ಗೆ ಅಮೆರಿಕ ಕಳವಳ

ವಾಷಿಂಗ್ಟನ್, ಮೇ 12: ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಹಾಗೂ ಪತ್ರಿಕಾ ಸ್ವಾತಂತ್ರ್ಯದ ವಿಷಯಗಳ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದ್ದು ಪಾಕಿಸ್ತಾನದಲ್ಲಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಪ್ರಧಾನ ಸಹಾಯಕ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ತತ್ವಗಳು ಹಾಗೂ ಕಾನೂನನ್ನು ಎತ್ತಿಹಿಡಿಯುವುದನ್ನು , ಜತೆಗೆ ಮಾನವ ಹಕ್ಕುಗಳನ್ನು ಗೌರವಿಸುವುದನ್ನು ಅಮೆರಿಕ ಬಯಸುತ್ತಿದೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬಂಧನದ ಬಳಿಕ ಭುಗಿಲೆದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ಪಾಕಿಸ್ತಾನದಲ್ಲಿ ಆಗಲಿ ಅಥವಾ ಜಗತ್ತಿನ ಯಾವುದೇ ದೇಶದಲ್ಲಾಗಲೀ, ರಾಜಕೀಯ ಪಕ್ಷಗಳು ಪರಸ್ಪರ ದ್ವೇಷ ಸಾಧಿಸುವುದನ್ನು ನಾವು ಖಂಡಿಸುತ್ತೇವೆ.
ಇಂಟರ್ನೆಟ್ ಸ್ಥಗಿತ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕಾನೂನಿನ ನಿಯಮ ಮತ್ತು ಕಾನೂನಿನ ಅಡಿಯಲ್ಲಿ ಸಮಾನ ನ್ಯಾಯ ಸೇರಿದಂತೆ ನಾವು ವಿಶಾಲವಾದ ತತ್ವಗಳನ್ನು ಬೆಂಬಲಿಸುತ್ತೇವೆ’ ಎಂದು ಹೇಳಿದ್ದಾರೆ.
ಇಮ್ರಾನ್ ರನ್ನು ಮೇ 15ರವರೆಗೆ ಬಂಧಿಸುವಂತಿಲ್ಲ: ಹೈಕೋರ್ಟ್
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಯಾವುದೇ ಪ್ರಕರಣದಲ್ಲೂ ಅವರನ್ನು ಮೇ 15ರವರೆಗೆ ಬಂಧಿಸುವಂತಿಲ್ಲ ಎಂದು ಇಸ್ಲಮಾಬಾದ್ ಹೈಕೋರ್ಟ್ ಶುಕ್ರವಾರ ಮತ್ತೊಂದು ಆದೇಶ ಜಾರಿಗೊಳಿಸಿದೆ.
ಅಲ್ಲದೆ ಇಮ್ರಾನ್ ಗೆ ಬಿಗಿ ಭದ್ರತೆ ಒದಗಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದೆ. ಇದಕ್ಕೂ ಮುನ್ನ ಇಮ್ರಾನ್ ಗೆ ಕಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ 2 ವಾರ ಜಾಮೀನು ಮಂಜೂರುಗೊಂಡಿತ್ತು. ಆದರೆ ಇತರ ಪ್ರಕರಣಗಳಿಗೆ ಸಂಬಂಧಿಸಿ ಅವರ ಬಂಧನವಾಗಬಹುದು . ಆದ್ದರಿಂದ ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಒದಗಿಸುವಂತೆ ಇಮ್ರಾನ್ ವಕೀಲರು ಮನವಿ ಮಾಡಿಕೊಂಡಿದ್ದರು. ಈ ಕೋರಿಕೆಯನ್ನು ಇಸ್ಲಮಾಬಾದ್ ಹೈಕೋರ್ಟ್ ಪುರಸ್ಕರಿಸಿದೆ