ವಿಧಾನಸಭಾ ಚುನಾವಣೆ- 2023 | ರಾಜ್ಯಾದ್ಯಂತ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ

ಬೆಂಗಳೂರು: ಮೇ 10 ರಂದು ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ರಾಜ್ಯಾದ್ಯಂತ ಬಹುತೇಕ ಮತ ಎಣೆಕೆ ಕೇಂದ್ರಗಳಲ್ಲಿ ಆರಂಭಗೊಂಡಿದೆ.
ಮೊದಲಿಗೆ ಅಂಚೆ ಮತಗಳ ಎಣಿಕೆ ಆರಂಭವಾಗಿದೆ.
34 ಕ್ಷೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಮತಗಳ ಎಣಿಕೆ ಕಾರ್ಯಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತ ಎಣಿಕೆ ಕೇಂದ್ರಗಳ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.
► 224 ಕ್ಷೇತ್ರಗಳಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿ
ರಾಜ್ಯದ 224 ಕ್ಷೇತ್ರಗಳಲ್ಲಿ 2,615 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2430 ಪುರುಷ ಅಭ್ಯರ್ಥಿಗಳು, 184 ಮಹಿಳಾ ಅಭ್ಯರ್ಥಿಗಳು, ಓರ್ವ ಇತರೆ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದ್ದರು.
ಇನ್ನು 4 ಕ್ಷೇತ್ರಗಳಲ್ಲಿ ಮಾತ್ರ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಳ್ಳಾರಿ ನಗರ ಕ್ಷೇತ್ರದಲ್ಲಿ 24, ಹೊಸಕೋಟೆ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು, ಚಿತ್ರದುರ್ಗ 21, ಯಲಹಂಕ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಮತ್ತು 7 ವಿಧಾನಸಭೆ ಕ್ಷೇತ್ರಗಳಲ್ಲಿ ಮಾತ್ರ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.








