ಉಡುಪಿ: ಮತ ಎಣಿಕೆ ಕೇಂದ್ರಕ್ಕೆ ಲುಂಗಿಯಲ್ಲಿ ಮೊಬೈಲ್ ಬಚ್ಚಿಟ್ಟು ಬಿಜೆಪಿ ಅಭ್ಯರ್ಥಿಯ ಏಜೆಂಟ್
ಉಡುಪಿಯ ಮತ ಎಣಿಕಾ ಕೇಂದ್ರಕ್ಕೆ ತನ್ನ ಲುಂಗಿಯಲ್ಲಿ ಮೊಬೈಲ್ ಅಡಗಿಸಿಟ್ಟು ಕೊಂಡು ಬಂದ ವ್ಯಕ್ತಿಯನ್ನು ಹೊರ ಕಳಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಸದಾಶಿವ ಕಂಚಗೋಡು ಈ ರೀತಿ ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಕೊಂಡೊಯ್ಯಲು ಹೋಗಿ ಸಿಕ್ಕಿಬಿದ್ದ ವ್ಯಕ್ತಿ. ಈತ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರ ಏಜೆಂಟ್ ಎಂದು ತಿಳಿದುಬಂದಿದೆ. ಕೇಂದ್ರದೊಳಗೆ ಮೊಬೈಲ್ ನಿರ್ಬಂಧ ವಿಧಿಸಿದ್ದರೂ ಸದಾಶಿವ ಕಂಚಗೋಡು ತನ್ನ ಲುಂಗಿಯಲ್ಲಿ ಮೊಬೈಲ್ ಅನ್ನು ಕಟ್ಟಿಕೊಂಡು ಬಂದಿದ್ದನೆನ್ನಲಾಗಿದೆ.
ಮೊದಲ ಪ್ರವೇಶದಲ್ಲಿ ಪೊಲೀಸರ ಗಮನಕ್ಕೆ ಬಾರದಂತೆ ಒಳಗೆ ಬಂದ ಸದಾಶಿವ ಕಂಚಗೋಡು ಅವರನ್ನು ಎರಡನೇ ದ್ವಾರದಲ್ಲಿ ಪೊಲೀಸರು ತಪಾಸಣೆಗೆ ಒಳಪಡಿಸಿದರು. ಈ ವೇಳೆ ಖುದ್ದು ಎಸ್ಪಿ ಅಕ್ಷಯ ಹಾಕೇ ಮಚ್ಚಿಂದ್ರ ಸ್ಥಳದಲ್ಲಿದ್ದರು.
ತಪಾಸಣೆ ನಡೆಸಿದಾಗ ಸದಾಶಿವ ಕಂಚಗೋಡು ಲುಂಗಿಯಲ್ಲಿ ಮೊಬೈಲ್ ಕಟ್ಟಿರುವುದು ಪತ್ತೆಯಾಗಿದೆ. ಬಳಿಕ ಆತನನ್ನು ಮತಗಟ್ಟೆ ಪ್ರವೇಶ ಪಾಸ್ ಅನ್ನು ಕಿತ್ತುಕೊಂಡ ಪೊಲೀಸರು ಕೇಂದ್ರದಿಂದ ಹೊರಗೆ ಕಳುಹಿಸಿದರು ಎಂದು ತಿಳಿದುಬಂದಿದೆ.