ಮಂಗಳೂರು: ಯು.ಟಿ.ಖಾದರ್‌ಗೆ ಭರ್ಜರಿ ಗೆಲುವು

ಮಂಗಳೂರು, ಮೇ 13: ಮಾಜಿ ಸಚಿವ, ಹಾಲಿ ಶಾಸಕ, ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶದ ಅಧಿಕೃತ ಘೋಷಣೆ ಬಾಕಿಯಿದೆ.
ಯು.ಟಿ.ಖಾದರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಕುಂಪಲರನ್ನು 22,790 ಮತಗಳ ಅಂತರದಿಂದ ಸೋಲಿಸಿ 5ನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಖಾದರ್ 83,219 ಮತಗಳನ್ನು ಗಳಿಸಿದರೆ, ಸತೀಶ್ ಕುಂಪಲ 60,429 ಮತಗಳನ್ನು ಗಳಿಸಿದ್ದಾರೆ. SDPI ಅಭ್ಯರ್ಥಿ 15,054 ಮತಗಳನ್ನು ಗಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಲ್ಲಿ ಓರ್ವರಾಗಿರುವ ಯು.ಟಿ.ಖಾದರ್ ಕಳೆದ ಬಾರಿಗಿಂತ 3,051 ಅಧಿಕ ಮತಗಳಿಂದ ಜಯ ಗಳಿಸಿದ್ದಾರೆ.
ಮತ ಎಣಿಕೆಯ ಪ್ರಥಮ ಸುತ್ತಿನಿಂದಲೇ ಮುನ್ನಡೆ ಪಡೆದಿದ್ದ ಯು.ಟಿ.ಖಾದರ್ ಆನಂತರದ ಪ್ರತೀ ಸುತ್ತಿನಲ್ಲೂ ಮತಗಳ ಪ್ರಮಾಣವನ್ನು ಹೆಚ್ಚಿಸುತ್ತಾ ಸಾಗಿ ಅಂತಿಮವಾಗಿ 22,700 ಮತಗಳ ಅಂತರದ ಭರ್ಜರಿ ಜಯ ಸಾಧಿಸಿದರು.
2007ರ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಯು.ಟಿ.ಖಾದರ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. 2008, 2013, 2018ರಲ್ಲಿ ಗೆದ್ದಿದ್ದ ಯು.ಟಿ.ಖಾದರ್ ಈ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ. 2018ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಮಂಗಳೂರು ಕ್ಷೇತ್ರದಲ್ಲೊ ಮಾತ್ರ ಕಾಂಗ್ರೆಸ್ ಗೆದ್ದಿತ್ತು.
2013ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಯು.ಟಿ.ಖಾದರ್ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2018ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲೂ ಸಚಿವರಾಗಿದ್ದರು. ನಂತರ ಅರ್ಹವಾಗಿ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕರಾಗಿ ಆಯ್ಕೆಯಾಗಿದ್ದರು.
*ಕಳೆದ 5 ಚುನಾವಣೆಗಳ ಗೆಲುವಿನ ಅಂತರ
2007ರ ಉಪ ಚುನಾವಣೆ- 8,032
2008ರ ಚುನಾವಣೆ- 7,049
2013ರ ಚುನಾವಣೆ- 29,111
2018ರ ಚುನಾವಣೆ-19,739
2023ರ ಚುನಾವಣೆ-22,790











