ಮಂಗಳೂರು ನಗರ ಉತ್ತರ: ಬಿಜೆಪಿಯ ಭರತ್ ಶೆಟ್ಟಿಗೆ ಭರ್ಜರಿ ಗೆಲುವು

ಮಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಭರತ್ ಶೆಟ್ಟಿ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಡಾ.ಭರತ್ ಶೆಟ್ಟಿ 1,03,531 ಮತಗಳನ್ನು ಗಳಿಸಿದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಇನಾಯತ್ ಅಲಿ 70,609 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 32,922 ಮತಗಳು. ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಮಾಜಿ ಶಾಸಕ ಮೊಯ್ದಿನ್ ಬಾವ 5,256 ಮತಗಳನ್ನು ಗಳಿಸಿದ್ದಾರೆ.
2018ರಲ್ಲಿ ಕಾಂಗ್ರೆಸ್‌ನ ಮೊಯ್ದಿನ್ ಬಾವಾ ವಿರುದ್ಧ ಮೊದಲ ಬಾರಿಗೆ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಭರತ್ ಶೆಟ್ಟಿ ಇದೀಗ ಕಾಂಗ್ರೆಸ್‌ನ ಇನಾಯತ್ ಅಲಿ ಅವರನ್ನು ಸೋಲಿಸಿದ್ದಾರೆ.
ಆರಂಭಿಕ ಹಿನ್ನಡೆಯನ್ನು ಹೊರತುಪಡಿಸಿದರೆ ಬಳಿಕ ಎಲ್ಲ ಸುತ್ತುಗಳ ಎಣಿಕೆಯಲ್ಲೂ ಮೇಲುಗೈ ಸಾಧಿಸಿದ ಭರತ್ ಶೆಟ್ಟಿ ಅಂತಿಮವಾಗಿ ಭರ್ಜರಿ ಗೆಲುವು ಸಾಧಿಸಿದರು.
ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಮೇಯರ್ ಕವಿತಾ ಸನಿಲ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಪಕ್ಷದ ಮುಖಂಡ ಮುಹಮ್ಮದ್ ಅಲ್ತಾಫ್ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಮಾಜಿ ಶಾಸಕ ಮೊಯ್ದಿನ್ ಬಾವಾ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ ಅವರ ಮಧ್ಯೆ ಟಿಕೆಟ್‌ಗೆ ಭಾರೀ ಪೈಪೋಟಿ ಇತ್ತು. ಇಬ್ಬರೂ ಪ್ರತ್ಯೇಕವಾಗಿ ಪ್ರಚಾರ ಆರಂಭಿಸಿದ್ದರು. ಅಂತಿಮವಾಗಿ ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಇನಾಯತ್ ಅಲಿಯ ಹೆಸರನ್ನು ಕೊನೆಯ ಕ್ಷಣದಲ್ಲಿ ಘೋಷಿಸಿತ್ತು.
ಹೈಕಮಾಂಡ್ ವಿರುದ್ಧ ಬಂಡೆದ್ದ ಮಾಜಿ ಶಾಸಕ ಮೊಯ್ದಿನ್ ಬಾವಾ ಜೆಡಿಎಸ್‌ನಿಂದ ಕಣಕ್ಕಿಳಿದರೆ, ಇನಾಯತ್ ಅಲಿ ಬಿರುಸಿನ ಪ್ರಚಾರ ಆರಂಭಿಸಿದ್ದರು. ಇನಾಯತ್ ಅಲಿ ಮತ್ತು ಮೊಯ್ದಿನ್ ಬಾವಾರ ಸ್ಪರ್ಧೆಯ ಲಾಭ ಪಡೆದ ಬಿಜೆಪಿಯ ಭರತ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ.