ಸುಳ್ಯ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯರಿಗೆ ಭರ್ಜರಿ ಗೆಲುವು

ಸುಳ್ಯ, ಮೇ 13: ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಗೆಲುವು ಸಾಧಿಸಿದ್ದು, ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.
ತನ್ನ ಸಮೀಪದ ಪ್ರತಿಸ್ಪರ್ಧಿ ಜಿ.ಕೃಷ್ಣಪ್ಪರನ್ನು 30,875 ಮತಗಳ ಅಂತರದಿಂದ ಸೋಲಿಸಿದ್ದಾರೆ. ಭಾಗೀರಥಿ 93,911 ಮತಗಳನ್ನು ಪಡೆದರೆ, ಜಿ.ಕೃಷ್ಣಪ್ಪ 63,036 ಮತಗಳನ್ನು ಗಳಿಸಿದ್ದರು. ಇಲ್ಲಿ 2,562 ನೋಟಾ ದಾಖಲಾಗಿದೆ.
ಸತತವಾಗಿ 35 ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿರುವ ಸುಳ್ಯ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಮಾಜಿ ಸಚಿವ ಎಸ್.ಅಂಗಾರರ ಬದಲು ಭಾಗೀರಥಿ ಮುರುಳ್ಯರಿಗೆ ಟಿಕೆಟ್ ನೀಡುವ ಮೂಲಕ ಹೊಸ ಮುಖಕ್ಕೆ ಅವಕಾಶ ನೀಡಿತ್ತು.
ದ.ಕ. ಜಿಪಂ ಮಾಜಿ ಸದಸ್ಯೆಯಾಗಿರುವ ಭಾಗೀರಥಿ ಮುರುಳ್ಯ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಶಾಂತಿನಗರ ಮುರುಳ್ಯದ ದಿ.ಗುರುವ ಮತ್ತು ದಿ.ಕೊರಗ್ಗು ದಂಪತಿಯ ಪುತ್ರಿ. ಪಿಯುಸಿ ವಿದ್ಯಾಭ್ಯಾಸ ಪಡೆದಿರುವ ಅವರು ಗೌರವ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು.
ಬಿಜೆಪಿಯಿಂದ ಸ್ಪರ್ಧಿಸಿ ಎಣ್ಮೂರು ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿ, ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿದ್ದರು. ವಿವಿಧ ಸಹಕಾರಿ ಸಂಘಗಳಲ್ಲಿ, ಧಾರ್ಮಿಕ ಕ್ಷೇತ್ರದಲ್ಲೂ, ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.