ಕಾರ್ಕಳದಲ್ಲಿ ಹೆಂಡ, ಅಕ್ರಮ ಹಣ ಹಂಚಿ ಗೆದ್ದಿದ್ದಾರೆ: ಮುನಿಯಾಲು ಉದಯ ಶೆಟ್ಟಿ ಆರೋಪ

ಉಡುಪಿ: ಕಾರ್ಕಳ ಕ್ಷೇತ್ರದಲ್ಲಿ ಹೆಂಡ, ಅಕ್ರಮ ಹಣ ಹಂಚಿ ಸುನೀಲ್ ಕುಮಾರ್ ಗೆದ್ದಿದ್ದಾರೆ. ಪ್ರತಿ ಬೂತ್‌ನಲ್ಲಿ 100 ಮತಗಳನ್ನು ಇವರು ಕದ್ದಿದ್ದಾರೆ. ಅದೇ ಮತದಲ್ಲಿಯೇ ಗೆದಿದ್ದಾರೆ. ಆದರೆ ಅದರಲ್ಲಿ ಒಂದು ಬೂತ್ ನಲ್ಲಿ ನಕಲಿ ಮತದಾನ ಮಾಡುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಕಾರ್ಕಳ ಕ್ಷೇತ್ರದಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿ ಮತ ಎಣಿಕಾ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಎಲ್ಲರು ನನ್ನ ಬೆಂಬಲಿಸಿದರು. ಆದರೆ ಸ್ವಲ್ಪದರಲ್ಲಿ ಸೋಲು ಕಾಣುವಂತಾಯಿತು. ಎಲ್ಲದಕ್ಕೂ ದೇವರ ಅನುಗ್ರಹ ಬೇಕು. ಕೆಲವರು ನೋಟಿಗಾಗಿ ಮತವನ್ನು ಮಾರಿಕೊಂಡಿರುವುದು ನೋಡಿದರೆ ಬೇಜಾರಾಗುತ್ತದೆ ಎಂದರು.
ಜನರಿಗೆ ಫ್ಲೆಕ್ಸ್ ರಹಿತ, ಆಡಂಬರ ರಹಿತ, ಅಹಂಕಾರ ರಹಿತ ಉತ್ತಮ ಆಡಳಿತ ಕೊಡಬೇಕು ಎಂದು ನನ್ನ ಯೋಜನೆ, ಯೋಚನೆ ಆಗಿತ್ತು. ಸೋತಾರೂ ನಾನು ಮುಂದಿನ ದಿನ ಐದು ವರ್ಷಗಳ ಜನರ ಸೇವೆ ಮಾಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಚುನಾವಣೆ ಎದುರಿಸಿದ್ದೇನೆ. ಕೊನೆಯ ಮೂರುನಾಲ್ಕು ದಿನಗಳಲ್ಲಿ ಏನು ಮಾಡಿದರು ಎಂಬುದು ಇಡೀ ಕ್ಷೇತ್ರದ ಜನರಿಗೆ ಗೊತ್ತಿದೆ. ದುಷ್ಟ, ಅಕ್ರಮದ ಹಣ, ಹೆಂಡ ಹಂಚಿ ಜನರನ್ನು ಖರೀದಿಸಿದರು. ಇನ್ನಾದರೂ ಇವರಿಗೆ ದೇವರು ಒಳ್ಳೆಯ ಬುದ್ದಿ ಕೊಟ್ಟು ದುಹಂಕಾರ ಬಿಟ್ಟು ಜನರಿಗೆ ನೆಮ್ಮದಿಯ ಹಾಗೂ ಒಳ್ಳೆಯ ಆಡಳಿತ ನೀಡು ವಂತಾಗಲಿ ಎಂದರು.
ಕಾರ್ಕಳದ ಜನರಿಗೆ ಪ್ರೀತಿ ಮಮತೆ ಬೇಕಿತ್ತು. ಅದಕ್ಕೆ ಅವಕಾಶ ಸಿಗಲಿಲ್ಲ. ಜನರೊಂದಿಗೆ ಇರಲು ಕೇವಲ ರಾಜಕೀಯ ಬೇಕಿಲ್ಲ. ಸೋತಾರೂ ಸಮಾಜ ಸೇವೆ ಮಾಡಿಕೊಂಡು ಇರುತ್ತೇನೆ. ಟಿಕೆಟ್ ಕೊನೆಯ ಕ್ಷಣದ ಬದಲು ಬೇಗನೆ ಸಿಗುತ್ತಿದ್ದರೆ ಇನ್ನಷ್ಟು ಜನರನ್ನು ತಲುಪಿಸಲು ಸಾಧ್ಯವಾಗುತ್ತಿತ್ತು. ನಮ್ಮ ಸರಕಾರದ ಗ್ಯಾರಂಟಿ ಕಾರ್ಡ್‌ಗಳಲ್ಲಿನ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತೇವೆ. ನಮ್ಮ ಸರಕಾರ ಒಳ್ಳೆಯ ಆಡಳಿತ ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.