ಚುನಾವಣೆಯಲ್ಲಿ ತಂದೆ-ಮಕ್ಕಳು, ಸಹೋದರರಿಗೆ ಭರ್ಜರಿ ಗೆಲುವು; ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಮೇ 13: ರಾಜ್ಯ ವಿಧಾನಸಭೆ ಚುನಾವಣೆ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿದ್ದು, ಅಪ್ಪ-ಮಕ್ಕಳು ನಾಲ್ಕು ಜೋಡಿ ಜಯಭೇರಿ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್‍ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದರೆ, ದಾವಣಗೆರೆ ಉತ್ತರ ಕ್ಷೇತ್ರದಿಂದ ಶಾಮನೂರು ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಗೆಲುವು ದಾಖಲು ಮಾಡಿದ್ದಾರೆ. ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಎಂ.ಕೃಷ್ಣಪ್ಪ, ಗೋವಿಂದರಾಜನಗರ ಕ್ಷೇತ್ರದಿಂದ ಕೃಷ್ಣಪ್ಪರ ಪುತ್ರ ಪ್ರಿಯಾ ಕೃಷ್ಣ ಗೆಲವು ಸಾಧಿಸಿದ್ದಾರೆ.
ಅತ್ತ ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಎ.ಮಂಜು ಜಯ ಗಳಿಸಿದ್ದು, ಕೊಡುಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜು ಪುತ್ರ ಡಾ.ಮಂತರ್ ಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್‍ನ ಜಿ.ಟಿ.ದೇವೇಗೌಡ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೆ, ಅವರ ಪುತ್ರ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹರೀಶ್ ಗೌಡ ಗೆಲುವು ಸಾಧಿಸಿದ್ದಾರೆ.
ಮಾವ-ಅಳಿಯ ಗೆಲುವು: ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದರೆ, ಅವರ ಮಾವ ಪುಟ್ಟಸ್ವಾಮಿಗೌಡ ಗೌರಿಬಿದನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಜಯಗಳಿಸಿದ್ದಾರೆ. ಶರತ್ ಮತ್ತು ಪುಟ್ಟಸ್ವಾಮಿಗೌಡ ಅಳಿಯ-ಮಾವ, ಇಬ್ಬರು ಒಟ್ಟಿಗೆ ವಿಧಾನಸಭೆ ಪ್ರವೇಶ ಮಾಡುತ್ತಿರುವುದು ಈ ಬಾರಿ ಫಲಿತಾಂಶದ ವಿಶೇಷವಾಗಿದೆ.
ಸಹೋದರರ ಜಯ: ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಹೋದರ ಎಚ್.ಡಿ.ರೇವಣ್ಣ ಜಯಗಳಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಸಹೋದರರು ಗೆಲುವು ಸಾಧಿಸಿದ್ದಾರೆ.







