ಉಡುಪಿ: ಮತ ಎಣಿಕೆ ಕೇಂದ್ರದ ಬಳಿ ನಿಷೇಧಾಜ್ಞೆ ಉಲ್ಲಂಘಿಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು

ಉಡುಪಿ : ನಗರದ ಬ್ರಹ್ಮಗಿರಿ ಸೈಂಟ್ ಸಿಸಿಲೀಸ್ ಶಾಲೆಯಲ್ಲಿನ ಮತ ಎಣಿಕಾ ಕೇಂದ್ರದ ಅಜ್ಜರಕಾಡು ಬಳಿಯ ಪ್ರವೇಶ ದ್ವಾರದ ಎದುರು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ನಿಷೇಧಾಜ್ಞೆ ಉಲ್ಲಂಘಿಸಿ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.
ತಮ್ಮ ಅಭ್ಯರ್ಥಿಗಳು ಗೆಲ್ಲುವ ಮುನ್ಸೂಚನೆ ದೊರೆಯುತ್ತಿದ್ದಂತೆ ವಿವಿಧ ಕ್ಷೇತ್ರ ಗಳಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಮತ ಎಣಿಕಾ ಕೇಂದ್ರದ ಬಳಿ ಜಮಾಯಿಸಿದರು. ಬಿಜೆಪಿ ಅಭ್ಯರ್ಥಿಗಳ ಮುನ್ನಡೆ ಮಾಹಿತಿ ಬರುತ್ತಿದ್ದಂತೆಯೇ ಜಯಘೋಷಗಳನ್ನು ಹಾಕುತ್ತಿದ್ದರು.
ಬ್ಯಾರಿಕೇಡ್‌ಗಳನ್ನು ದಾಟಿ ಕಾರ್ಯಕರ್ತರು ಕೇಂದ್ರದ ದ್ವಾರದ ಬಳಿ ಆಗಮಿಸಿದರು. ಈ ವೇಳೆ ಹೆಚ್ಚುವರಿ ಪೊಲೀಸರು ಹಾಗೂ ಅರೆ ಸೇನಾ ಪಡೆ ಗಳನ್ನು ಕರೆಸಿ ಕಾರ್ಯಕರ್ತರನ್ನು ಹಿಂದಕ್ಕೆ ಕಳುಹಿಸಿದರು. ಆದರೂ ತೆರಳದ ಹಿನ್ನೆಲೆಯಲ್ಲಿ ಪೊಲೀಸ್ ಜೀಪಿನಲ್ಲಿದ್ದ ಮೈಕ್ ಮೂಲಕ ನಿಷೇಧಾಜ್ಞೆ ಜಾರಿ ಯಲ್ಲಿರುವ ಬಗ್ಗೆ ಪೊಲೀಸರು ಘೋಷಣೆ ಮಾಡಿದರು.
ಅಲ್ಲೇ ಸಮೀಪ ತೆರೆದಿಟ್ಟ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿ ದರು. ನಂತರ ತಮ್ಮ ಕ್ಷೇತ್ರಗಳ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೇ ಕಾರ್ಯಕರ್ತರು ಅಲ್ಲೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುನೀಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಮಾಲಾರ್ಪಣೆ ಹಾಕಿ ಎತ್ತಿಕೊಂಡು ಸಂಭ್ರಮ ಪಟ್ಟರು. ಸ್ಥಳದಲ್ಲಿ ಉಡುಪಿ ಡಿವೈಎಸ್ಪಿ ದಿನಕರ ನೇತೃತ್ವದಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಕೊನೆಯವರೆಗೂ ಇದ್ದ ಮುನಿಯಾಲು, ಸೊರಕೆ
ಮತ ಎಣಿಕೆ ಕೇಂದ್ರದಲ್ಲಿ ಐದೂ ಕ್ಷೇತ್ರಗಳ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಆಗಮಿಸಿದ್ದು, ಅದರಲ್ಲಿ ಸೋಲು ಸೂಚನೆ ದೊರೆಯುತ್ತಿದ್ದಂತೆ ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಕುಂದಾಪುರ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಎರಡನೇ ಸುತ್ತಿನಲ್ಲೇ ಹೊರ ನಡೆದರು.
ಆದರೆ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹಾಗೂ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಕೊನೆಯವರೆಗೂ ಗೆಲ್ಲುವ ವಿಶ್ವಾಸದಿಂದ ಕೇಂದ್ರದಲ್ಲೇ ಇದ್ದರು. ಸಾಕಷ್ಟು ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಕಾರ್ಕಳ ಕ್ಷೇತ್ರದ ಶಾಸಕರಾಗಿದ್ದ ಸುನೀಲ್ ಕುಮಾರ್ ಗೆಲುವು ನಿಶ್ಚಿತವಾದ ಬಳಿಕ ಅಂದರೆ ಮಧ್ಯಾಹ್ನ ವೇಳೆ ಕೇಂದ್ರಕ್ಕೆ ಆಗಮಿಸಿದರು.
ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಕೇಂದ್ರ ದಲ್ಲಿದ್ದ ಭೋಜನ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಊಟ ಮಾಡಿದರು.











