ಚುನಾವಣಾ ಫಲಿತಾಂಶದ ಬಗ್ಗೆ ಸಿ.ಟಿ.ರವಿ ಮೊದಲ ಪ್ರತಿಕ್ರಿಯೆ

ಚಿಕ್ಕಮಗಳೂರು, ಮೇ 13: ಜಿಲ್ಲೆಯ ಜನ ನೀಡಿದ ಜನಾದೇಶಕ್ಕೆ ತಲೆಬಾಗುತ್ತೇನೆ. ಸೋಲು ಗೆಲುವು ಸ್ವಾಭಾವಿಕ. ಇದು ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ಶನಿವಾರ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲು ಕಂಡ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೆದ್ದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಹಿಂದೆ ಸಿಕ್ಕ ಅಲ್ಪ ಸಮಯದಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ತಂದಿದ್ದು, ಈ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರ ತೀರ್ಮಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತೇನೆ. ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದಾರೆ. ಪಕ್ಷದ ಜವಾಬ್ದಾರಿಯ ಜೊತೆಗೆ ಇರುವ ಸಮಯದಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಸಮಯ ನೀಡಿದ್ದೇನೆ, ಕಾರ್ಯಕರ್ತರು ಧೃತಿಗೆಡುವುದು ಬೇಡ. ಕಾರ್ಯಕರ್ತರಿಗೆ ಸದಾ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬುವ ಕೆಲಸ ಮಾಡುತ್ತೇನೆ. ಮತ ನೀಡಿದ ಎಲ್ಲಾ ಮತದಾರರಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ







