ಬಾಂಗ್ಲಾದತ್ತ ಮೋಚ ಚಂಡಮಾರುತ: ರೊಹಿಂಗ್ಯಾ ನಿರಾಶ್ರಿತರ ಸ್ಥಳಾಂತರ

ಡಾಕ, ಮೇ 13: ಗಂಟೆಗೆ 220 ಕಿ.ಮೀ ವೇಗದ ಗಾಳಿಯೊಂದಿಗೆ ಬಾಂಗ್ಲಾದತ್ತ ಮುನ್ನುತ್ತಿರುವ ಮೋಚ ಚಂಡಮಾರುತ ರವಿವಾರ ಬಾಂಗ್ಲಾಕ್ಕೆ ಅಪ್ಪಳಿಸುವ ನಿರೀಕ್ಷೆಯಿದ್ದು ಈ ಹಿನ್ನೆಲೆಯಲ್ಲಿ ಅಪಾಯದ ಪ್ರದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ.
ಈ ವಲಯದಲ್ಲಿ ಕಳೆದೊಂದು ದಶಕದಲ್ಲಿ ಬೀಸಿದ ಅತ್ಯಂತ ಪ್ರಬಲ ಚಂಡಮಾರುತ ಎಂದೆನಿಸಿರುವ ಮೋಚ ಚಂಡಮಾರುತ ರವಿವಾರ ಬೆಳಿಗ್ಗೆ ಬಾಂಗ್ಲಾದ ಕೋಕ್ಸ್ ಬಝಾರ್ಗೆ ಅಪ್ಪಳಿಸುವ ನಿರೀಕ್ಷೆಯಿದೆ. ಇಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಟೆಂಟ್ಗಳಲ್ಲಿ ಸುಮಾರು 1 ದಶಲಕ್ಷದಷ್ಟು ರೊಹಿಂಗ್ಯಾಗಳು ನೆಲೆಸಿದ್ದು ಅವರನ್ನು ಟ್ರಕ್ ಮತ್ತಿತರ ವಾಹನಗಳ ಮೂಲಕ ಸಮುದಾಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ರೊಹಿಂಗ್ಯಾಗಳು ಇಲ್ಲಿ ಶಾಶ್ವತವಾಗಿ ಮನೆಕಟ್ಟಿ ನೆಲೆಸಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಹೆಚ್ಚಿನ ಟೆಂಟ್ಗಳನ್ನು ಬೆಟ್ಟಗುಡ್ಡಗಳ ಇಳಿಜಾರಿನಲ್ಲಿ ನಿರ್ಮಿಸಲಾಗಿದೆ.
ರವಿವಾರ ಚಂಡಮಾರುತದ ಜತೆ ಭಾರೀ ಮಳೆಯೂ ಸುರಿಯುವ ನಿರೀಕ್ಷೆಯಿದ್ದು ಭೂಕುಸಿತ ಸಂಭವಿಸಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಚಂಡಮಾರುತ ಹಾದುಹೋಗುವ ಪ್ರದೇಶದಲ್ಲಿರುವ ಜನಪ್ರಿಯ ಪ್ರವಾಸೀತಾಣ ಸೈಂಟ್ ಮಾರ್ಟಿನ್ಸ್ ದ್ವೀಪದ ನಿವಾಸಿಗಳಿಗೂ ಅಪಾಯದ ಮುನ್ನೆಚ್ಚರಿಕೆ ರವಾನಿಸಲಾಗಿದೆ ಎಂದು ಬಾಂಗ್ಲಾದೇಶದ ಉಪ ನಿರಾಶ್ರಿತರ ಆಯುಕ್ತ ಶಂಸುದ್ ದೌಝ ಹೇಳಿದ್ದಾರೆ. ಬಾಂಗ್ಲಾದ ಅತೀದೊಡ್ಡ ಬಂದರುನಗರ ಚಿತ್ತಗಾಂಗ್ನಲ್ಲಿ ಎಲ್ಲಾ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಮ್ಯಾನ್ಮಾರ್ನ ಸಾವಿರಾರು ಜನರ ಮೇಲೆ ಪರಿಣಾಮ ಬೀರಿದ್ದು ಮ್ಯಾನ್ಮಾರ್ ನ ರಾಖಿನೆ ರಾಜ್ಯದಲ್ಲಿ 6 ದಶಲಕ್ಷ ಜನತೆ ಮಾನವೀಯ ನೆರವಿನ ಅಗತ್ಯದಲ್ಲಿದ್ದಾರೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.
ನೆರೆದೇಶ ಮ್ಯಾನ್ಮಾರ್ನ ಪಶ್ಚಿಮದ ಕರಾವಳಿನಗರ ಸಿಟ್ವೆಯಲ್ಲೂ ಟೆಂಟ್ಗಳಲ್ಲಿ ನೆಲೆಸಿರುವ ರೊಹಿಂಗ್ಯಾಗಳನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 1,50,000ದಷ್ಟು ಜನಸಂಖ್ಯೆಯ ಈ ನಗರದಲ್ಲಿ ಅಂಗಡಿಗಳು ಹಾಗೂ ಮಾರುಕಟ್ಟೆಗಳನ್ನು ಮುಚ್ಚಲಾಗಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಮ್ಯಾನ್ಮಾರ್ನಲ್ಲಿ ರೊಹಿಂಗ್ಯಾಗಳ ಸ್ಥಳಾಂತರ ಪ್ರಕ್ರಿಯೆಯ ಮೇಲೆ ಸೇನಾಡಳಿತ ನಿಗಾ ವಹಿಸಿದೆ. ರಾಖಿನೆ ರಾಜ್ಯಕ್ಕೆ ಸೋಮವಾರದವರೆಗೆ ಎಲ್ಲಾ ವಿಮಾನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಮ್ಯಾನ್ಮಾರ್ ಏರ್ವೇಸ್ ಇಂಟರ್ನ್ಯಾಷನಲ್ ಹೇಳಿದೆ.