ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಿ ಹೊಸ ಲಸಿಕೆ ಯೋಜನೆ : ಜಿ7 ಗುಂಪಿನ ನಿರ್ಧಾರ

ಟೋಕಿಯೊ, ಮೇ 13: ಮುಂದಿನ ಸಾಂಕ್ರಾಮಿಕ ರೋಗಕ್ಕೆ ಸನ್ನದ್ಧರಾಗಿರಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೊಸ ಲಸಿಕಾ ಕಾರ್ಯಕ್ರಮ ರೂಪಿಸಲು 7 ಶ್ರೀಮಂತ ದೇಶಗಳ ಗುಂಪು `ಜಿ7' ನಿರ್ಧರಿಸಿದ್ದು ಈ ಕುರಿತು ಮುಂದಿನ ವಾರ ನಡೆಯಲಿರುವ ಜಿ7 ಮುಖಂಡರ ಶೃಂಗಸಭೆಯಲ್ಲಿ ಘೋಷಿಸಲಾಗುವುದು ಎಂದು ಜಪಾನ್ ನ ಯೊಮಿಯುರಿ ಪತ್ರಿಕೆ ವರದಿ ಮಾಡಿದೆ.
ಜಿ7 ದೇಶಗಳಲ್ಲದೆ, ಭಾರತದಂತಹ ಜಿ20 ದೇಶಗಳು, ವಿಶ್ವ ಆರೋಗ್ಯ ಸಂಘಟನೆ, ವಿಶ್ವಬ್ಯಾಂಕ್ನಂತಹ ಅಂತರಾಷ್ಟ್ರೀಯ ಸಂಸ್ಥೆಗಳು ಈ ಯೋಜನೆಯಲ್ಲಿ ಬಾಗಿಯಾಗಲಿವೆ ಎಂದು ಜಪಾನ್ ಸರಕಾರದ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಲಸಿಕೆಗಳು ಮತ್ತು ಪ್ರತಿರಕ್ಷಣೆಗಾಗಿ ಜಾಗತಿಕ ಒಕ್ಕೂಟದ ಆಶ್ರಯದಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ಸುಮಾರು 2 ಶತಕೋಟಿ ಡೋಸ್ ಗಳಷ್ಟು ಕೊರೋನವೈರಸ್ ಲಸಿಕೆಯನ್ನು ಒದಗಿಸಲಾಗಿತ್ತು. ಆದರೆ ಲಸಿಕೆ ಹಂಚಿಕೆಯಲ್ಲಿ ಸಮಾನತೆಯನ್ನು ಕಾಯ್ದುಕೊಂಡಿಲ್ಲ. ತಮ್ಮ ಪ್ರಜೆಗಳಿಗೆ ಮೊದಲು ಲಸಿಕೆ ಒದಗಿಸಲು ಕೆಲವು ಶ್ರೀಮಂತ ದೇಶಗಳು ಆದ್ಯತೆ ನೀಡಿದ್ದವು. ಬಡ ದೇಶಗಳಲ್ಲಿ ಶೇಖರಣಾ ವ್ಯವಸ್ಥೆಯ ಕೊರತೆಯು ಲಸಿಕೆ ಪೂರೈಕೆಯಲ್ಲಿ ವಿಳಂಬಕ್ಕೆ ಹಾಗೂ ಲಕ್ಷಾಂತರ ಡೋಸ್ ಲಸಿಕೆಗಳು ಅವಧಿ(ಎಕ್ಸ್ಪಯರಿ ಡೇಟ್) ಪೂರ್ಣಗೊಂಡ ಕಾರಣ ವ್ಯರ್ಥವಾಗಿದೆ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆ ರೂಪಿಸಲಾಗಿದ್ದು ಲಸಿಕೆ ಉತ್ಪಾದನೆ ಮತ್ತು ಖರೀದಿಗೆ ಮೀಸಲು ನಿಧಿ ಬಳಕೆ, ಕೋಲ್ಡ್ ಸ್ಟೋರೇಜ್ಗಳ ಸ್ಥಾಪನೆ ಮತ್ತು ಮುಂದಿನ ಜಾಗತಿಕ ಸಾಂಕ್ರಾಮಿಕಕ್ಕೆ ಸಿದ್ಧರಾಗಿರಲು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಒದಗಿಸುವುದು ಈ ಹೊಸ ಯೋಜನೆಯ ಆದ್ಯತೆಯಾಗಿದೆ ಎಂದು ವರದಿ ಹೇಳಿದೆ.
ಈ ವರ್ಷದ ಜಿ7 ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಜಪಾನ್ `ಚೀನಾ ಮತ್ತು ರಶ್ಯದ ಹೆಚ್ಚುತ್ತಿರುವ ಪ್ರಭಾವವನ್ನು ಎದುರಿಸಲು ಪೂರೈಕೆ ಸರಪಳಿ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆಯಂತಹ ವ್ಯಾಪಕ ವಿಷಯಗಳಲ್ಲಿ ಉದಯೋನ್ಮುಖ ರಾಷ್ಟ್ರಗಳಿಂದ ಬೆಂಬಲವನ್ನು ನಿರ್ಮಿಸಲು' ಬಯಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.







