ದಕ್ಷಿಣ ಭಾರತ ಬಿಜೆಪಿ ಮುಕ್ತ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
''ನಾನು ಕರ್ನಾಟಕ ಭೂಮಿ ಪುತ್ರ, ಇದು ನನ್ನ ಸರದಿ''

ಬೆಂಗಳೂರು, ಮೇ 13: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನಿಂದ ದೇಶದಲ್ಲಿ ಹೊಸ ಉತ್ಸಾಹ ಬಂದಿದ್ದು, ಈ ಮೂಲಕ ಇಡೀ ದಕ್ಷಿಣ ಭಾರತವು ಬಿಜೆಪಿ ಮುಕ್ತವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈ ಬಾರಿ ಪ್ರಚಂಡ ಬಹುಮತದಿಂದ ಆರಿಸಿ ಬರುತ್ತದೆ ಎಂದು ಹೇಳಿದ್ದೆವು. ಅದೇ ರೀತಿಯಲ್ಲಿ ಪಕ್ಷಕ್ಕೆ ಗೆಲುವಾಗಿದೆ. ಈ ಗೆಲುವು ಕರ್ನಾಟಕದ ಜನರ ಗೆಲುವಾಗಿದ್ದು, ಈ ಬಾರಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಾಗಿ ಆರಿಸಿದ್ದಾರೆ. 35 ವರ್ಷದ ಬಳಿಕ ಭಾರೀ ಬಹುಮತ ಸಿಕ್ಕಿದೆ ಎಂದರು.
ನಮ್ಮೆಲ್ಲರ ಸಾಮೂಹಿಕ ಪ್ರಯತ್ನ ಫಲಿಸಿ ಗೆಲುವು ಲಭಿಸಿದೆ. ಏನಾದರೂ ಸಣ್ಣ ವ್ಯತ್ಯಾಸವಾಗಿದ್ದರೆ, ಸರ್ವಾಧಿಕಾರ ಹತ್ತಿರವಾಗುತ್ತಿತ್ತು. ಆದರೆ ಎಲ್ಲರ ಶ್ರಮದಿಂದ ಇಂತಹ ದೊಡ್ಡ ಗೆಲುವಾಗಿದೆ. ನಾವು ಕೊಟ್ಟ ಗ್ಯಾರಂಟಿ ಭರವಸೆಯನ್ನು ಮೊದಲನೇ ಕ್ಯಾಬಿನೆಟ್‍ನಲ್ಲಿ ಮಾಡಬೇಕು ಎಂದು ಖರ್ಗೆ ತಿಳಿಸಿದರು.
ಪ್ರಧಾನಿ ಮೋದಿ ನಾನು ಗುಜರಾತ್ ಭೂಮಿ ಪುತ್ರ ಅಂದಿದ್ದರು. ನಾನು ಕರ್ನಾಟಕ ಭೂಮಿ ಪುತ್ರ, ಇದು ನನ್ನ ಸರದಿ. ಕರ್ನಾಟಕದ ಜನರು ಮನೆ ಮಗನಿಗೆ ಮತ ನೀಡುತ್ತಾರೆಯೇ ಹೊರತು ನಿಮಗೆ ನೀಡುವುದಿಲ್ಲ ಎಂದು ಖರ್ಗೆ ತಿರುಗೇಟು ನೀಡಿದರು.
ಮೇಕೆದಾಟು ಹೋರಾಟ, ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್‍ಗೆ ಅನುಕೂಲವಾಗಿದೆ. ಯಾತ್ರೆ ಹೋದಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ. ಇದಕ್ಕೆ ರಾಹುಲ್ ಗಾಂಧಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಖರ್ಗೆ ಹೇಳಿದರು.







