ಮಹಾರಾಷ್ಟ್ರ: ನಟಿ ತುನಿಶಾ ಶರ್ಮಾ ಮೃತದೇಹ ಪತ್ತೆಯಾಗಿದ್ದ ಸ್ಟುಡಿಯೊ ಅಗ್ನಿ ದುರಂತದಲ್ಲಿ ನಾಶ
ಪಾಲ್ಘರ್, ಮೇ 13: ನಟಿ ತುನಿಶಾ ಶರ್ಮಾ ಅವರ ಸಾವಿನ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ಫಿಲ್ಮ್ ಸ್ಟುಡಿಯೊ ಅಗ್ನಿ ದುರಂತದಲ್ಲಿ ನಾಶವಾಗಿದೆ. ಮುಂಬೈಯ ಹೊರವಲಯದ ವಸಾಯಿಯ ಕಾಮನ್ನಲ್ಲಿರುವ ಭಜನ್ಲಾಲ್ ಸ್ಟುಡಿಯೋದಲ್ಲಿ ಶುಕ್ರವಾರ ಮಧ್ಯರಾತ್ರಿ ಬೆಂಕಿ ಹತ್ತಿಕೊಳ್ಳಲು ಆರಂಭವಾಯಿತು ಎಂದು ಅಗ್ನಿ ಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಶನಿವಾರ ಮುಂಜಾನೆ ಸುಮಾರು 4 ಗಂಟೆಗೆ ಬೆಂಕಿ ನಂದಿಸಲಾಯಿತು. ಬೆಂಕಿ ಆಕಸ್ಮಿಕ ಸಂಭವಿಸಲು ಕಾರಣ ಏನೆಂದು ಇದುವರೆಗೆ ತಿಳಿದು ಬಂದಿಲ್ಲ ಎಂದು ವಸಾಯಿ-ವಿಹಾರ್ ನಗರ ಮುನ್ಸಿಪಲ್ ಕಾರ್ಪೊರೇಶನ್ನ ಅಧಿಕಾರಿ ತಿಳಿಸಿದ್ದಾರೆ.
ಈ ಭಜನ್ಲಾಲ್ ಸ್ಟುಡಿಯೋದಲ್ಲಿ ಹಾಕಲಾದ ಸೆಟ್ನಲ್ಲಿ ಟಿ.ವಿ. ಶೋ. ‘ಅಲಿ ಬಾಬಾ: ದಾಸ್ತಾನ್ ಎ ಕಾಬೂಲ್’ ಚಿತ್ರೀಕರಣ ನಡೆಯುತ್ತಿರುವ ಸಂದರ್ಭ ವಾಶ್ರೂಮ್ನಲ್ಲಿ ನಟಿ ಟುನಿಶಾ ಶರ್ಮಾ (21) ಮೃತದೇಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
Next Story





