ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ದ್ರಾವಿಡ ನಾಡಿನಿಂದ ಅಳಿಸಿ ಹೋದ ಬಿಜೆಪಿ: ಸ್ಟಾಲಿನ್
ಚೆನ್ನೈ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ದ್ರಾವಿಡ ನಾಡಿನಿಂದ ಅಳಿಸಿ ಹೋಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಮಾನ ಮನಸ್ಕ ಶಕ್ತಿಗಳು ಒಗ್ಗೂಡಬೇಕು ಎಂದು ಶನಿವಾರ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕರೆ ನೀಡಿದ್ದಾರೆ
ಕರ್ನಾಟಕ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಉನ್ನತ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ. ಎಂ.ಕೆ.ಸ್ಟಾಲಿನ್ ಅವರೊಂದಿಗೆ ಫೋನ್ ಮೂಲಕ ಖುದ್ದಾಗಿ ಮಾತನಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಸ್ಟಾಲಿನ್, “ದ್ರಾವಿಡ ಕುಟುಂಬದ ನೆಲವು ಬಿಜೆಪಿ ಮುಕ್ತವಾಗಿದೆ. ಈಗ ನಾವು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಮರುಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಭರ್ಜರಿ ಜಯ ಸಾಧಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು” ಎಂದು ಶ್ಲಾಘಿಸಿದ್ದಾರೆ.
"ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅಸಮರ್ಥನೀಯವಾಗಿ ಅನರ್ಹಗೊಳಿಸಿರುವುದು, ರಾಜಕೀಯ ವಿರೋಧಿಗಳ ವಿರುದ್ಧ ಉನ್ನತ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು, ಹಿಂದಿ ಹೇರಿಕೆ, ತೀವ್ರ ಭ್ರಷ್ಟಾಚಾರಗಳು ಕರ್ನಾಟಕ ಜನರ ಮನಸ್ಸಿನಲ್ಲಿ ಮಾರ್ದನಿಸಿದವು ಮತ್ತು ಕನ್ನಡಿಗರ ಹೆಮ್ಮೆಯು ಬಿಜೆಪಿಯ ಜನವಿರೋಧಿ ರಾಜಕೀಯಕ್ಕೆ ತಕ್ಕ ಪಾಠ ಕಲಿಸಿತು" ಎಂದೂ ಅವರು ಹೇಳಿದ್ದಾರೆ.