ಇದು ಕಾಂಗ್ರೆಸ್ ಗೆಲುವಲ್ಲ, 7ಕೋಟಿ ಕನ್ನಡಿಗರ ಗೆಲುವು: ದಿನೇಶ್ ಗುಂಡೂರಾವ್
ನೂರು ಬಾರಿ ಬಂದರೂ ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ನಡೆಯುವುದಿಲ್ಲ

ಬೆಂಗಳೂರು: ಮತದಾರರ ನಿರೀಕ್ಷೆಯಂತೆ ಕನ್ನಡಿಗರ ಅಸ್ಮಿತೆಯನ್ನು ಕಾಪಾಡುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಬಾರಿಯ ಚುನಾವಣೆಯಲ್ಲಿ ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಆಶೀವಾರ್ದಿಸಿದ್ದಾರೆ. 135 ಅಭ್ಯರ್ಥಿಗಳ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು ಎಂದು ನಾನು ಭಾವಿಸುವುದಿಲ್ಲ. ಇದು 7ಕೋಟಿ ಕನ್ನಡಿಗರ ಗೆಲುವಾಗಿದೆ ಎಂದು ಹೇಳಿದ್ದಾರೆ.
ಕಳೆದ ಮೂರೂವರೆ ವರ್ಷಗಳ BJP ಸರ್ಕಾರದ ಭ್ರಷ್ಟ ಆಡಳಿತ, 40% ಕಮೀಷನ್ ದಂಧೆ, ಡಬಲ್ ಇಂಜಿನ್ ಸರ್ಕಾರದ ಸುಳ್ಳು ಆಶ್ವಾಸನೆಗಳು ಹಾಗೂ ಜನರನ್ನು ದಿಕ್ಕು ತಪ್ಪಿಸಲು ಹಿಂದಿನ ಸರ್ಕಾರ ಮುನ್ನೆಲೆಗೆ ತರುತ್ತಿದ್ದ ಕೋಮು ಪ್ರಚೋದಿತ ಸಂಗತಿಗಳಿಂದ ಜನ ರೋಸಿ ಹೋಗಿ ಬದಲಾವಣೆ ಬಯಸಿದ್ದರು. ಅದರಂತೆ ದೊಡ್ಡ ಮಟ್ಟದ ಬದಲಾವಣೆ ತಂದಿದ್ದಾರೆ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ರಾಜ್ಯ BJP ನಾಯಕರು ಮೋದಿಯವರನ್ನೇ ನೆಚ್ಚಿಕೊಂಡು ಚುನಾವಣೆ ಗೆಲ್ಲುವ ಯತ್ನ ಮಾಡಿದ್ದರು. ಆದರೆ ಮೋದಿಯವರಿಂದ ರಾಜ್ಯಕ್ಕೆ ಏನು ಕೊಡುಗೆ ಎಂಬ ಜನರ ಪ್ರಶ್ನೆಗೆ ಬಿಜೆಪಿಯವರಿಂದ ಸಮರ್ಪಕ ಉತ್ತರವೇ ಇರಲಿಲ್ಲ. 25 ಜನ BJP ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದರೂ ಮೋದಿ ಸರ್ಕಾರ ಕರ್ನಾಟಕವನ್ನು ಕಡೆಗಣಿಸಿತ್ತು. ಅದರ ಫಲವೇ ಈ ಫಲಿತಾಂಶ. ಕರ್ನಾಟಕದಲ್ಲಿ 'ಮೋದಿ ಮ್ಯಾಜಿಕ್' ನಡೆಯುವುದಿಲ್ಲ ಎಂದು ನಾವು ಮೊದಲೇ ಹೇಳಿದ್ದೆವು. ಆದರೂ ಅವರು 22 ಬಾರಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದರು. ಅವರು ನೂರು ಬಾರಿ ಬಂದಿದ್ದರೂ ಫಲಿತಾಂಶ ವ್ಯತ್ಯಾಸವಾಗುತ್ತಿರಲಿಲ್ಲ. ರಾಜ್ಯದ ಜನ ಪ್ರಜ್ಞಾವಂತರು. ಮೋದಿಯವರ ಸುಳ್ಳನ್ನು ನಂಬುವುದಿಲ್ಲ ಎಂಬ ಸಂದೇಶವನ್ನು ಈ ಚುನಾವಣೆಯ ಮೂಲಕ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಎಲ್ಲಾ ಸಮುದಾಯದವರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಪಕ್ಷದ ಜಾತ್ಯಾತೀತ ನಿಲುವಿಗೆ ಜನ ಜೈ ಎಂದಿರುವ ಲಕ್ಷಣವಿದು. ರಾಹುಲ್ ಗಾಂಧಿಯವರು ಹೇಳಿದಂತೆ ಕರ್ನಾಟಕದಲ್ಲಿ ದ್ವೇಷದ ಅಂಗಡಿ ಮುಚ್ಚಿ, ಪ್ರೀತಿಯ ಅಂಗಡಿ ತೆರೆದಿದೆ. ಈ ಫಲಿತಾಂಶ ದ್ವೇಷ ಹರಡುವವರಿಗೆ ಒಂದು ಪಾಠ ಎಂದು ಟ್ವೀಟ್ ಮಾಡಿದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 14, 2023
ಈ ಬಾರಿಯ ಚುನಾವಣೆಯಲ್ಲಿ ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಆಶೀವಾರ್ದಿಸಿದ್ದಾರೆ.
135 ಅಭ್ಯರ್ಥಿಗಳ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು ಎಂದು ನಾನು ಭಾವಿಸುವುದಿಲ್ಲ.
ಇದು 7ಕೋಟಿ ಕನ್ನಡಿಗರ ಗೆಲುವಾಗಿದೆ.
ಮತದಾರರ ನಿರೀಕ್ಷೆಯಂತೆ ಕನ್ನಡಿಗರ ಅಸ್ಮಿತೆಯನ್ನು ಕಾಪಾಡುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ







