ನನ್ನನ್ನು ಈಗ ನಿರುದ್ಯೋಗಿ ಮಾಡಿದ್ದಾರೆ: ಸೋಮಣ್ಣ ಬೇಸರ

ಬೆಂಗಳೂರು: 'ನನ್ನಈ ಕ್ಷೇತ್ರ (ಗೋವಿಂದರಾಜ ನಗರ) ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತು ಅಂತ ಎರಡು ಕ್ಷೇತ್ರಗಳಲ್ಲಿ ಹೋಗಿ ಸ್ಪರ್ಧಿಸಿದೆ' ಎಂದು ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿ. ಸೋಮಣ್ಣ ಹೇಳಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸೋಲನ್ನು ಸ್ವೀಕಾರ ಮಾಡಬೇಕು. ಅದನ್ನು ಸ್ವೀಕಾರ ಮಾಡದಿದ್ದರೆ ನನ್ನಂತ ಹುಚ್ಚ ಮತ್ತೊಬ್ಬರಿಲ್ಲ. ಆದರೆ ಒಂದು ವಿಚಾರವೆಂದರೆ ನನನ್ನು ನಿರುದ್ಯೋಗಿ ಮಾಡಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆ ಯಿಂದ ಕೆಲಸ ಆರಂಭಿಸುತ್ತಿದ್ದವನು ನಾನು' ಎಂದು ಬೇಸರ ವ್ಯಕ್ತಪಡಿಸಿದರು.
''ಸೋತಾಗಿದೆ, ಏನು ಮಾತನಾಡಲಿ ? ಮಾತನಾಡುವುದು ಅಗತ್ಯ ಇಲ್ಲ, ಸೋತಿದ್ದೇನೆ ಅಷ್ಟೆ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ. ಚಾಲೆಂಜ್ ಆಗಿ ತೆಗೆದುಕೊಂಡೆ, ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನಈ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತು ಅಂತ ಹೋದೆ. ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ'' ಎಂದು ಸ್ಪಷ್ಟಪಡಿಸಿದರು.