ಕರಾವಳಿ ಫಲಿತಾಂಶಗಳ ಕನ್ನಡಿಯಲ್ಲಿ ಕಂಡದ್ದು - ಮಧ್ಯಮ ವರ್ಗದ ಸ್ವಲೀನತೆ

ಕರ್ನಾಟಕದ ಮತದಾರರು ಕಾಂಗ್ರೆಸ್‌ಗೆ ಒಲಿದಿದ್ದಾರೆ; ನಿಚ್ಚಳ ಬಹುಮತ ನೀಡಿದ್ದಾರೆ. ಆದರೆ ಕರಾವಳಿ, ಅದರಲ್ಲೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮಾತ್ರ 2018ರ ಫಲಿತಾಂಶವನ್ನೇ ಮತ್ತೊಮ್ಮೆ ನೀಡಿವೆ. ಅದು ಅಂದಿನ ಮೋದಿ ಅಲೆಯ ಫಲಿತಾಂಶ. ಈಗ ಮತ್ತೊಮ್ಮೆ ಪುನರಾವರ್ತನೆಗೊಂಡಿದೆ.
ಯಾವುದೇ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ, ಕಾಂಗ್ರೆಸ್ ಕಡೆಯಿಂದ ಕರಾವಳಿಯ ಕುರಿತು ದೊಡ್ಡ ನಿರೀಕ್ಷೆಗಳೇನಿದ್ದಂತಿರಲಿಲ್ಲ. ಸಾಂಪ್ರದಾಯಿಕವಾಗಿ ಬಿಜೆಪಿಯ ‘‘ಪ್ರಯೋಗಶಾಲೆ’’ ಎಂದೇ ಪರಿಗಣಿತವಾಗಿರುವ ಕರಾವಳಿಯಲ್ಲಿ ಅಯೋಧ್ಯೋತ್ತರ ರಾಜಕೀಯವು ಸಂಪೂರ್ಣವಾಗಿ ಬಿಜೆಪಿಯ ಹಿಡಿತದಲ್ಲಿಯೇ ಇದೆ. ತಳಮಟ್ಟದಲ್ಲಿ ಕಾರ್ಯಕರ್ತರ ವಿಸ್ತೃತ ಜಾಲವನ್ನು ಹೊಂದಿರುವ ಬಿಜೆಪಿ, ಚುನಾವಣೆಯನ್ನು ಬೂತ್‌ಗಳ ಮಟ್ಟದಲ್ಲಿ ಮೈಕ್ರೊಮ್ಯಾನೇಜ್ ಮಾಡುತ್ತಿರುವುದು ಈ ಬಾರಿಯ ಚುನಾವಣೆಗೆ ಹೊಸದೇನಲ್ಲ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್, ಕೇವಲ ನಾಯಕರ ಪಕ್ಷ. ಅಲ್ಲಿ ಕೆಡೇರ್ ಮಟ್ಟದ ಕಾರ್ಯಕರ್ತರಿಲ್ಲ. ಚುನಾವಣೆಯ ಕಾಲಕ್ಕೆ ದುಡಿಯುವ ತಂಡಗಳನ್ನೇ ಆಧರಿಸಿ ಸಾಂಪ್ರದಾಯಿಕವಾಗಿ ಚುನಾವಣೆಯನ್ನು ಎದುರಿಸುವ ತನ್ನ ವಿಧಾನವನ್ನು ಕಾಂಗ್ರೆಸ್ ಇನ್ನೂ ಸುಧಾರಿಸಿಕೊಂಡಿಲ್ಲ. ಕರಾವಳಿಗೆ ಅದು ಸಾಲುವುದಿಲ್ಲ.
ಹಾಗಾಗಿ, ಈ ವರ್ಷ ಕರಾವಳಿಯ ಮಟ್ಟಿಗೆ ಇದ್ದ ಕುತೂಹಲ ಎಂದರೆ, ರಾಜ್ಯದಲ್ಲಿ ವ್ಯಾಪಕವಾಗಿ ‘‘ಮೋದಿ ಅಲೆ’’ ಇದ್ದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಕಳೆದ ಬಾರಿ 19ರಲ್ಲಿ ಕೇವಲ 3 ಸೀಟುಗಳನ್ನು (ಉ.ಕ-2, ಉಡುಪಿ-0, ದ.ಕ-1) ಪಡೆದಿದ್ದ ಕಾಂಗ್ರೆಸ್, ಈ ಬಾರಿ ಆಡಳಿತ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಎಷ್ಟು ಸೀಟುಗಳನ್ನು ಪಡೆದೀತು ಎಂಬ ಲೆಕ್ಕಾಚಾರ ಮಾತ್ರ. ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವೂ ಕರಾವಳಿಯಲ್ಲಿ ಈ ಬಾರಿಯೂ 3-5/19 ಸೀಟುಗಳನ್ನು ಕಾಂಗ್ರೆಸ್‌ಗೆ
ನೀಡಿದ್ದವು. ಈಗ ಅಂತಿಮವಾಗಿ ಕಾಂಗ್ರೆಸ್ 6 ಸೀಟುಗಳನ್ನು (ಉ.ಕ-4, ಉಡುಪಿ-0, ದ.ಕ-2) ಗಳಿಸಿಕೊಂಡಿದೆ. ಇದರಲ್ಲಿ ದೊಡ್ಡ ಪಾಲು ಆರ್ಥಿಕವಾಗಿ ಹಿಂದುಳಿದಿರುವ ಉತ್ತರಕನ್ನಡದ್ದು. ಉಡುಪಿಯಲ್ಲಿ ಹಿಂದಿನ ಬಾರಿಯ ಫಲಿತಾಂಶ ಪುನರಾವರ್ತನೆ; ಮಂಗಳೂರಿನಲ್ಲೂ ಬಹುತೇಕ ಅದೇ.
ಹಾಗಾದರೆ, ರಾಜ್ಯದ ಎಲ್ಲೆಡೆ ಕಾಣಿಸಿಕೊಂಡ ‘‘ಆಡಳಿತ ವಿರೋಧಿ ಅಲೆ’’ ಕರಾವಳಿಯಲ್ಲಿ ಕಾಣಿಸಿಕೊಂಡಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಬಹಳ ಕಷ್ಟವಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಟಿಪಿಕಲ್ ಮಧ್ಯಮವರ್ಗ ಬೇರೆಡೆಗೆ ಹೋಲಿಸಿದರೆ, (ಉತ್ತರ ಕನ್ನಡ ಹೊರತುಪಡಿಸಿ) ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು. ಹಾಗಾಗಿ ಕೋವಿಡ್ ಕಾಲದ ಆರ್ಥಿಕ ಸಂಕಟಗಳ ಹೊರತಾಗಿಯೂ ದ.ಕ; ಉಡುಪಿ ಜಿಲ್ಲೆಗಳ ಜನ ಇನ್ನೂ ನರೇಂದ್ರ ಮೋದಿಯವರನ್ನೇ ನೆಚ್ಚಿಕೊಂಡಂತಿದೆ. ಅದಕ್ಕೆ ಪೂರಕವಾಗಿ, ಈ ಎರಡು ಜಿಲ್ಲೆಗಳಲ್ಲಿ, ಕಾಂಗ್ರೆಸ್‌ನಲ್ಲಿ ಪಕ್ಷ ಸಂಘಟನೆ ತೀರಾ ದುರ್ಬಲವಾಗಿದ್ದು, ನಾಯಕತ್ವದ ಕ್ರೆಡಿಬಲಿಟಿಯ ಪ್ರಶ್ನೆಗಳೂ ಇವೆ. ಚುನಾವಣೆಯ ಕಾಲಕ್ಕೆ ತಕ್ಕಷ್ಟೇ ರಾಜಕೀಯ ಸಂಘಟನೆ ಮಾಡುವ, ಜಾತಿ ಪ್ರಾಬಲ್ಯದ ಆಧಾರದಲ್ಲಿ ಅಭ್ಯರ್ಥಿ ನಿರ್ಧಾರ ಮಾಡುವ ಕಾಂಗ್ರೆಸ್‌ನ ಸಂಪ್ರದಾಯ, ಕರಾವಳಿ ಜಿಲ್ಲೆಯ ಪ್ರಬಲ ಬಿಜೆಪಿ ಪರಿವಾರ ಸಂಘಟನೆಗಳ ಎದುರು ಸುಲಭವಾಗಿ ಸಪ್ಪೆಯಾಗಿಬಿಡುತ್ತದೆ. ಅವರ ಮೈಕ್ರೊ ಮ್ಯಾನೇಜ್‌ಮೆಂಟ್ ಎದುರು ಕಾಂಗ್ರೆಸ್‌ಗೆ ಆಳಕ್ಕಿಳಿಯಲು ಸಾಧ್ಯವಾಗುವುದೇ ಇಲ್ಲ. ಇಲ್ಲಿ ವಿಚಿತ್ರ ಸ್ಥಿತಿ ಎಂದರೆ, ಕಾಂಗ್ರೆಸ್ಸಿಗೆ ಮತದಾರರಿದ್ದಾರೆ, ಆದರೆ ಕ್ರೆಡಿಬಲ್ ನಾಯಕರಿಲ್ಲ! ಈ ಸ್ಥಿತಿಗೆ ಪರಿಹಾರ ಸಿಗದೇ ಕರಾವಳಿಯಲ್ಲಿ ಬಿಜೆಪಿ ಹೊಂದಿರುವ ಹಿಡಿತ ತಪ್ಪುವುದು ಕಷ್ಟ.
ಈ ಬಾರಿ, ಚುನಾವಣೆಗೆ ಮನ್ನ, ಆಡಳಿತ ವಿರೋಧಿ ಅಲೆಯನ್ನು ಮುಂದಾಗಿ ಊಹಿಸಿ, ತನ್ನ ಪ್ರಯೋಗಶಾಲೆಯಲ್ಲಿ ಅಭ್ಯರ್ಥಿಗಳನ್ನೇ ಬದಲಿಸಿದ ಬಿಜೆಪಿ, 6/19 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಆರೂ ಮಂದಿ ಜಯಗಳಿಸಿದ್ದಾರೆ. ಚುನಾವಣಾ ಪ್ರಚಾರದಲ್ಲೂ ಕೂಡ ಬಹಳ ಎಚ್ಚರಿಕೆಯ ಹೆಜ್ಜೆ ಗಳನ್ನು ಇರಿಸಿದ್ದ ಬಿಜೆಪಿ, ಕರಾವಳಿಯ ಶಿಕ್ಷಿತ ಮತದಾರರಲ್ಲಿ ಅಭ್ಯರ್ಥಿಯನ್ನು ನೋಡಿ ಮತ ಕೊಡಬೇಡಿ, ಮೋದಿಯವರನ್ನು ನೋಡಿ ಮತ ಕೊಡಿ, ದೇಶಕ್ಕಾಗಿ ಮತ ಕೊಡಿ ಎಂದೇ ವಿನಂತಿಸಿತ್ತು. ಮಧ್ಯಮ-ಮೇಲುಮಧ್ಯಮ ವರ್ಗದ ಮತದಾರರು ಇದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದು ಕರಾವಳಿಯಲ್ಲಿ ನಿಚ್ಚಳವಾಗಿ ಕಾಣಿಸಿದೆ. ಈ ದೇಶಕ್ಕಾಗಿ ಮತಕೊಡುವ ಅಬ್ಬರದಲ್ಲಿ, ರಾಜ್ಯದ ಬೇರೆ ಕ್ಷೇತ್ರಗಳಲ್ಲಿದ್ದ ಆಡಳಿತ ವಿರೋಧಿ ಅಲೆ ಕರಾವಳಿಯ ಮಟ್ಟಿಗೆ ಹೆಚ್ಚಿನ ಬಿರುಸು ತೋರಿಸಿದ್ದು ಕಾಣಿಸಲಿಲ್ಲ.
‘‘ಅವ್ಯಕ್ತದ ಕುರಿತ ಭಯ’’ದ ಮೂಲದಿಂದ ಹುಟ್ಟಿರುವ ಇಲ್ಲಿನ ಮತದಾರರ ಪಕ್ಷ/ಸಿದ್ಧಾಂತ ನಿಷ್ಠೆಗಳು ದೈನಂದಿನ ಬದುಕಿನ ಕಷ್ಟ-ಕೋಟಲೆಗಳನ್ನು ಮೀರಿ ತಮ್ಮ ಜನಪ್ರತಿನಿಧಿಗಳ ಆಯ್ಕೆಯಲ್ಲೂ ಕಾಣಿಸುವುದು ಸಹಜ ಬೆಳವಣಿಗೆಯಲ್ಲ. ಪೆಟ್ರೋಲ್ ಬೆಲೆ 200ರೂ. ಆದರೂ ನಮ್ಮ ನಿಷ್ಠೆ ಬದಲಾಗದೆಂಬಷ್ಟು ‘‘ವಾಟ್ಸ್ ಆ್ಯಪ್ ಯೂನಿವರ್ಸಿಟಿ ದರ್ಜೆಯ’’ ಕರ್ಮಠತೆಗೆ ಕರಾವಳಿಯಲ್ಲಿ ಆವರಿಸಿರುವ ಒಂದು ವಿಕ್ಷಿಪ್ತ ‘‘ಅಸುರಕ್ಷತೆಯ ಭಾವನೆ’’ ಕಾರಣ ಇರಬಹುದು. ಜಿಹಾದ್, ಹಿಜಾಬ್, ಟಿಪ್ಪ್ಪು, ಪಠ್ಯಪುಸ್ತಕ, ಬಜರಂಗಿ? ಇತ್ಯಾದಿ ರೂಪಗಳಲ್ಲಿ ಈ ಅಸುರಕ್ಷತೆಯನ್ನು ವ್ಯವಸ್ಥಿತವಾಗಿ ಬೆಚ್ಚಗಿರಿಸುವ ಪ್ರಯತ್ನ ಸತತವಾಗಿ ನಡೆಯುತ್ತಿರುತ್ತದೆ. ಈ ಅಸುರಕ್ಷತೆಯ ಮೂಲ ಪತ್ತೆಯಾಗದೇ ಈಗಿರುವ ಸ್ಥಿತಿ ಕರಾವಳಿಯಲ್ಲಿ ಬದಲಾಗುವ ಲಕ್ಷಣಗಳಿಲ್ಲ.
ಪ್ರತೀ ಬಾರಿ ಇಂತಹದೊಂದು ತಿರುಚು ಫಲಿತಾಂಶದ ಕಾರಣದಿಂದಾಗಿ, ಬಿಜೆಪಿಯೇತರ ಸರಕಾರಗಳು ಬಂದಾಗಲೆಲ್ಲ ಕರಾವಳಿಗೆ ರಾಜಕೀಯ ಪ್ರಾಶಸ್ತ್ಯ ಸಿಗುವುದು ಕಡಿಮೆ. ಕೇಳಿದರೆ ನೀವೆಷ್ಟು ಸೀಟು ತಂದುಕೊಟ್ಟಿರಿ ಎಂಬ ಪ್ರಶ್ನೆ ಏಳುವುದು ಸಹಜ. ಇಲ್ಲಿ ಪ್ರಬಲ ನಾಯಕತ್ವದ, ಸಂಘಟನೆಯ ಕೊರತೆಗೆ ಅದೂ ಒಂದು ಕಾರಣವಿರಬಹುದು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದೆ. ಯಲ್ಲಾಪುರ ಬಿಟ್ಟರೆ ಬೇರೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ.
ಕಾಂಗ್ರೆಸಿನ ದೇಶಪಾಂಡೆ ಅವರು ತಮ್ಮ ಸೀಟನ್ನು ಉಳಿಸಿಕೊಂಡಿದ್ದಾರೆ, ಬಿಜೆಪಿಯ ಹಿರಿಯ ನಾಯಕ, ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೋತಿದ್ದಾರೆ.
ಆರ್ಥಿಕವಾಗಿ ಮುಂದುವರಿದ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ತನ್ನ ಹಿಂದಿನ ಸಾಧನೆಯನ್ನು ಪುನರಾವರ್ತಿಸಿದೆ. ಮೋದಿ ಪರವಾದ ಒಲವು ಇಲ್ಲಿ ಇನ್ನೂ ತಣಿದಿಲ್ಲ. ಕಾಪು, ಬೈಂದೂರು, ಉಡುಪಿಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ಬಿಜೆಪಿಗೆ ಲಾಭ ತಂದುಕೊಟ್ಟಿದೆ.
ಆರ್ಥಿಕವಾಗಿ ಮುಂದುವರಿದಿರುವ ಮತ್ತೊಂದು ಜಿಲ್ಲೆ ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಯು.ಟಿ. ಖಾದರ್ ಮತ್ತೊಮ್ಮೆ ಗೆದ್ದಿದ್ದಾರೆ. ಬಿಜೆಪಿಯ ಭದ್ರಕೋಟೆ ಪುತ್ತೂರಿನಲ್ಲಿ ಅವರ ಮತಗಳು ಒಡೆದು ಕಾಂಗ್ರೆಸ್ ಒಂದು ಪುಟ್ಟ ಅಂತರದ ಜಯ ಗಳಿಸಿದ್ದು ಬಿಟ್ಟರೆ, ಬಹುತೇಕ ಕಳೆದ ಬಾರಿಯ ಫಲಿತಾಂಶವೇ ಮರುಕಳಿಸಿದೆ.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಗೆದ್ದಿರುವ ಒಟ್ಟು ಸ್ಥಾನಗಳಲ್ಲಿ ದೊಡ್ಡ ಪಾಲು ಕರಾವಳಿಯದೇ! ಅದೂ ಇಲ್ಲದಿದ್ದರೆ ಅವರ ಸ್ಥಿತಿ ಇನ್ನಷ್ಟು ಹದಗೆಟ್ಟಿರುತ್ತಿತ್ತು.







