ಮುಂಬೈ: 24 ಕೋ.ರೂ. ಮೌಲ್ಯದ ವಿದೇಶಿ ಸಿಗರೇಟ್‌ಗಳು ವಶ, ಐವರ ಬಂಧನ

ಮುಂಬೈ,ಮೇ 14: 24 ಕೋ.ರೂ.ಮೌಲ್ಯದ ವಿದೇಶಿ ಸಿಗರೇಟ್ ಗಳನ್ನು ವಶಪಡಿಸಿಕೊಂಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ವು ಅವುಗಳ ಕಳ್ಳ ಸಾಗಾಣಿಕೆಗೆ ಯತ್ನಿಸಿದ ಆರೋಪದಲ್ಲಿ ಆಮದುದಾರ ಸೇರಿದಂತೆ ಐವರು ವ್ಯಕ್ತಿಗಳನ್ನು ಬಂಧಿಸಿದೆ.
ಭಾರತೀಯ ಮಾನದಂಡಗಳನ್ನು ಪಾಲಿಸದ ಕಾರಣ ಈ ಸಿಗರೇಟ್ ಗಳ ಆಮದನ್ನು ನಿಷೇಧಿಸಲಾಗಿದೆ ಎಂದು ಡಿಆರ್ಐ ರವಿವಾರ ಹೇಳಿಕೆಯಲ್ಲಿ ತಿಳಿಸಿದೆ.ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಮುಂದಿನ ಕ್ಲಿಯರನ್ಸ್ಗಾಗಿ ಆರ್ಷಿಯಾ ಮುಕ್ತ ವ್ಯಾಪಾರ ಗೋದಾಮು ವಲಯಕ್ಕೆ ರವಾನೆಯಾಗಲಿದ್ದ ಕಂಟೇನರ್ನಿಂದ ಈ ಸಿಗರೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಆರ್ಐ ಅಧಿಕಾರಿಗಳು ಕಂಟೇನರ್ನ ಚಲನವಲನದ ಮೇಲೆ ನಿಗಾಯಿರಿಸಿದ್ದರು. ನವಿ ಮುಂಬೈನ ನವ ಶೇವಾ ಬಂದರಿನಿಂದ ಹೊರಟಿದ್ದ ಕಂಟೇನರ್ ತನ್ನ ಗಮ್ಯಸ್ಥಾನಕ್ಕೆ ಸಾಗುತ್ತಿದ್ದಾಗ ಅದನ್ನು ಖಾಸಗಿ ಗೋದಾಮೊಂದಕ್ಕೆ ತಿರುಗಿಸಲಾಗಿದ್ದು,ಅಲ್ಲಿ ಡಿಆರ್ಐ ಅಧಿಕಾರಿಗಳು ಅದನ್ನು ತಡೆದು ಶೋಧ ಕಾರ್ಯಾಚರಣೆ ನಡೆಸಿದ್ದರು ಎಂದು ಹೇಳಿಕೆಯು ತಿಳಿಸಿದೆ. 40 ಅಡಿ ಉದ್ದದ ಕಂಟೇನರ್ ಸಂಪೂರ್ಣವಾಗಿ ವಿವಿಧ ಬ್ರ್ಯಾಂಡ್ಗಳ ಒಟ್ಟು 1.07 ಕೋಟಿ ನಿಷೇಧಿತ ಸಿಗರೇಟ್ ಗಳಿಂದ ತುಂಬಿತ್ತು.
ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಲು ಕಂಟೇನರ್ಗಳಿಂದ ಸಿಗರೇಟ್ ಗಳನ್ನು ತೆಗೆದು ಆಮದು ದಾಖಲೆಗಳಲ್ಲಿ ಘೋಷಿಸಲಾಗಿದ್ದ ಸರಕುಗಳನ್ನು ತುಂಬುವ ಮೂಲಕ ನಿಷೇಧಿತ ಸಿಗರೇಟ್ ಗಳ ಕಳ್ಳ ಸಾಗಾಣಿಕೆಗೆ ಆರೋಪಿಗಳು ಉದ್ದೇಶಿಸಿದ್ದರು ಎಂದು ಹೇಳಿಕೆಯು ತಿಳಿಸಿದೆ.
ತ್ವರಿತ ಅನುಸರಣಾ ಕಾರ್ಯಾಚರಣೆಯಲ್ಲಿ ಇದೇ ಆರೋಪಿಗಳು ಈ ಮೊದಲು ಕಳ್ಳ ಸಾಗಾಣಿಕೆ ಮಾಡಿದ್ದ 13 ಲ.ಸಿಗರೇಟ್ ಗಳನ್ನೂ ಅಧಿಕಾರಿಗಳು ಬೇರೊಂದು ಗೋದಾಮಿನಿಂದ ವಶಪಡಿಸಿಕೊಂಡಿದ್ದಾರೆ.







