ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್

ಬೆಂಗಳೂರು, ಮೇ 14: ರಾಷ್ಟ್ರೀಯ ಕಿಸಾಸ್ ಕಾಂಗ್ರೆಸ್ ಪದಾಧಿಕಾರಿಯೂ ಆಗಿದ್ದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ.
ರವಿವಾರ ಕೆಪಿಸಿಸಿ ಕರ್ನಾಟಕ ಕಿಸಾನ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಿಸಾನ್ ವಿಭಾಗದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ನೇತೃತ್ವದಲ್ಲಿ ಲತಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಹಸಿರು ಶಾಲು ಧರಿಸಿದರು.
ಈ ಕುರಿತು ಮಾತನಾಡಿದ ಸಚಿನ್ ಮೀಗಾ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಲತಾ ಅವರು ಕಾಂಗ್ರೆಸ್ ಟಿಕೆಟ್ ಬಯಸಿದ್ದರು.ಆದರೆ, ಕೈತಪ್ಪಿದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 14ಸಾವಿರ ಮತಗಳಿಂದ ಜಯಗೊಳಿಸಿದ್ದಾರೆ. ಈಗ, ಪಕ್ಷಕ್ಕೆ ವಾಪಸ್ಸು ಆಗಿರುವುದು ಸಂತಸ ತಂದಿದೆ.ಅದೇ ರೀತಿ, ಕಿಸಾನ್ ಕಾಂಗ್ರೆಸ್ ದಾವಣಗೆರೆ ಜಿಲ್ಲಾ ಅಧ್ಯಕ್ಷರಾಗಿದ್ದ ಬಸವರಾಜ್ ವಿ.ಶಿವಗಂಗಾ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಬರೋಬ್ಬರಿ 18 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ಕುಡುಚಿ ವಿಧಾನಸಭಾ ಕ್ಷೇತ್ರದಿಂದಲೂ ರಾಜ್ಯ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಮಹೇಂದ್ರ ತಮ್ಮನವರ್ 25 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಅವರು ಹೇಳಿದರು.
ಕೃಷಿ ಪ್ರಧಾನ ರಾಜ್ಯದಲ್ಲಿ ರೈತ ಪರ ಹೋರಾಟ ನೆಡೆಸಿ ಪಕ್ಷವನ್ನು ಸಂಘಟಿಸಿ ಕಿಸಾನ್ ಕಾಂಗ್ರೆಸ್‍ನಲ್ಲಿ ಗೆದ್ದ ಶಾಸಕರುಗಳಿಗೆ ಮಂತ್ರಿ ಸ್ಥಾನ ನೀಡುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಈಗಾಗಲೇ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದೆ ಎಂದು ಅವರು ಹೇಳಿದರು.







