ಜೈಪುರ ಸರಣಿ ಸ್ಫೋಟ ಪ್ರಕರಣ : ಮೇ 17ರಂದು ಸುಪ್ರೀಂನಿಂದ ಸಂತ್ರಸ್ತರ ಕುಟುಂಬದ ಮನವಿ ಆಲಿಕೆ

ಹೊಸದಿಲ್ಲಿ, ಮೇ 14: 2008ರ ಜೈಪುರ ಸರಣಿ ಸ್ಫೋಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಮರಣ ದಂಡನೆಗೆ ಒಳಗಾದ ನಾಲ್ವರು ಆರೋಪಿಗಳನ್ನು ಅನಂತರ ರಾಜಸ್ಥಾನ ಉಚ್ಚ ನ್ಯಾಯಾಲಯ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಘಟನೆಯಲ್ಲಿ ಸಾವನ್ನಪ್ಪಿದ್ದವರ ಕುಟುಂಬಗಳ ಕೆಲವು ಸದಸ್ಯರು ಸಲ್ಲಿಸಿದ ಮೇಲ್ಮನವಿಯನ್ನು ಮೇ 17ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಸ್ಫೋಟದಲ್ಲಿ ಸಂತ್ರಸ್ತರಾದವರ ಕುಟುಂಬಗಳ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರ ಪ್ರತಿಪಾದನೆಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ರಾಜೇಶ್ ಬಿಂದಾಲ್ ಅವರನ್ನು ಒಳಗೊಂಡ ಪೀಠ ಪರಿಗಣಿಸಿತು. ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡುವಂತೆ ಮುಕುಲ್ ರೋಹ್ಟಗಿ ಕೋರಿದರು.
ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜಸ್ಥಾನ ಸರಕಾರ ಕೂಡ ಎಪ್ರಿಲ್ 25ರಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಉಚ್ಚ ನ್ಯಾಯಾಲಯದ ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲು ಘಟನೆಯ ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಸುಪ್ರೀಂ ಕೋರ್ಟ್ ಮೇ 12ರಂದು ಅನುಮತಿ ನೀಡಿತ್ತು ಹಾಗೂ ರಾಜ್ಯ ಸರಕಾರದ ಮೇಲ್ಮನವಿಯೊಂದಿಗೆ ಬುಧವಾರ ವಿಚಾರಣೆ ನಡೆಸಲು ಪಟ್ಟಿ ಮಾಡಿತು.
ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ರಾಜಸ್ಥಾನ ಉಚ್ಚ ನ್ಯಾಯಾಲಯ ಮಾರ್ಚ್ 29ರಂದು ಬದಿಗಿರಿಸಿತ್ತು. ಅಲ್ಲದೆ, ಕಳಪೆ ತನಿಖೆಗೆ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು.
2008 ಮೇ 13ರಂದು ಜೈಪುರದ ಮಾನಕ್ ಚೌಕ್ ಖಂಡಾ, ಚಾಂದ್‌ಪೋಲ್ ಗೇಟ್, ಬಡಿ ಚೌಪಡ್, ಚೋಟಿ ಚೌಪಡ್, ತ್ರಿಪೋಲಿಯಾ ಗೇಟ್, ಜೌಹರಿ ಬಝಾರ್ ಹಾಗೂ ಸಂಗಾನೇರಿ ಗೇಟ್‌ನಲ್ಲಿ ಸರಣಿ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 71 ಮಂದಿ ಸಾವನ್ನಪ್ಪಿದ್ದರು ಹಾಗೂ 185 ಮಂದಿ ಗಾಯಗೊಂಡಿದ್ದರು.







