ತಮಿಳು ನಾಡು: ನಕಲಿ ಮದ್ಯ ಸೇವಿಸಿ ಮೂವರ ಸಾವು,16 ಜನರು ಆಸ್ಪತ್ರೆಗೆ ದಾಖಲು

ವಿಲ್ಲುಪುರಂ (ತ.ನಾ.),ಮೇ 14: ವಿಲ್ಲುಪುರಂ ಜಿಲ್ಲೆಯ ಮರಕ್ಕನಂ ಎಂಬಲ್ಲಿ ನಕಲಿ ಮದ್ಯವನ್ನು ಸೇವಿಸಿದ ಬಳಿಕ ಮೂವರು ಮೃತಪಟ್ಟಿದ್ದು, ತೀವ್ರ ಅಸ್ವಸ್ಥಗೊಂಡಿರುವ ಇತರ 16 ಜನರನ್ನು ಪುದುಚೇರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದರು.
ಮರಕ್ಕನಮ್ನ ಎಕ್ಕಿಯಾರ್ಕುಪ್ಪಂ ಮೀನುಗಾರರ ವಸತಿ ಪ್ರದೇಶದಲ್ಲಿ ಶನಿವಾರ ಸಂಜೆ ಈ ದುರಂತ ಸಂಭವಿಸಿದೆ. ಮೃತರನ್ನು ಶಂಕರ (50),ದರಣಿವೇಲು (50) ಮತ್ತು ಸುರೇಶ (60) ಎಂದು ಗುರುತಿಸಲಾಗಿದೆ.
ನಕಲಿ ಮದ್ಯಮಾರಾಟ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರು ಮೃತರ ಕುಟುಂಬಗಳಿಗೆ 10 ಲ.ರೂ. ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 50,000 ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮರಕ್ಕನಂ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಆಸ್ಪತ್ರೆಗೆ ದಾಖಲಾಗಿರುವವರಿಗೆ ವಿಶೇಷ ಚಿಕಿತ್ಸೆ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಸ್ಟ್ಯಾಲಿನ್,ಅಕ್ರಮ ಮದ್ಯ ಮತ್ತು ಮಾದಕ ದ್ರವ್ಯಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿರುವ ತಮಿಳುನಾಡು ಬಿಜೆಪಿಯು,ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುವಲ್ಲಿ ಡಿಎಂಕೆ ಸರಕಾರವು ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದೆ.
ರಾಜ್ಯ ಸರಕಾರದ ಆಡಳಿತಾತ್ಮಕ ವೈಫಲ್ಯವನ್ನು ಟೀಕಿಸಿರುವ ಪ್ರತಿಪಕ್ಷ ನಾಯಕ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇ.ಕೆ.ಪಳನಿಸ್ವಾಮಿಯವರು, ತಕ್ಷಣ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.







