26 ಬಾರಿ ಎವರೆಸ್ಟ್ ಶಿಖರ ಆರೋಹಣ: ನೇಪಾಳದ ಪಸಂಗ್ ಶೆರ್ಪ ಸಾಧನೆ

ಕಠ್ಮಂಡು, ಮೇ 14: ನೇಪಾಳದ ಪಸಂಗ್ ದಾವ ಶೆರ್ಪ ರವಿವಾರ 26ನೇ ಬಾರಿಗೆ ಎವರೆಸ್ಟ್ ಶಿಖರಾರೋಹಣ ಮಾಡಿದ್ದು ಈ ಸಾಧನೆ ಮಾಡಿರುವ ವಿಶ್ವದ ಎರಡನೇ ವ್ಯಕ್ತಿ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.
46 ವರ್ಷದ ಪಸಂಗ್ ರವಿವಾರ ಎವರೆಸ್ಟ್ ನ 29,032 ಅಡಿ ಎತ್ತರವನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದುವರೆಗೆ ಕಮಿ ರಿಟ ಶೆರ್ಪ ಎಂಬವರು ಎವರೆಸ್ಟ್ ಶಿಖರವನ್ನು 26 ಬಾರಿ ಏರಿದ ಏಕೈಕ ವ್ಯಕ್ತಿ ಎನಿಸಿಕೊಂಡಿದ್ದರು. ಕಮಿ ರಿಟ ಶೆರ್ಪ ಅವರೂ ಈಗ ಮತ್ತೊಮ್ಮೆ ಎವರೆಸ್ಟ್ ಪರ್ವತವನ್ನು ಏರುವ ತಂಡದಲ್ಲಿದ್ದು ಪರ್ವತದ ಶಿಖರವನ್ನು ತಲುಪಿದರೆ 27ನೇ ಬಾರಿ ಪರ್ವತಾರೋಹಣ ಮಾಡಿದ ಹೊಸ ದಾಖಲೆ ಬರೆಯಲಿದ್ದಾರೆ ಎಂದು ನೇಪಾಳ ಸರಕಾರದ ಪ್ರವಾಸೋದ್ಯಮ ಅಧಿಕಾರಿ ಬಿಗ್ಯಾನ್ ಕೊಯಿರಾಲಾ ಹೇಳಿದ್ದಾರೆ.
ಪಾಕಿಸ್ತಾನದ ನೈಲಾ ಕಿಯಾನಿ ಎಂಬ ಮಹಿಳೆಯೂ ರವಿವಾರ ಎವರೆಸ್ಟ್ ಪರ್ವತದ ತುದಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು ಈ ವರ್ಷದ ಆರೋಹಣ ಅವಧಿಯಲ್ಲಿ ಎವರೆಸ್ಟ್ ಶಿಖರಾಗ್ರವನ್ನು ತಲುಪಿದ ಪ್ರಥಮ ವಿದೇಶಿ ವ್ಯಕ್ತಿಯೆಂಬ ದಾಖಲೆ ಬರೆದಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.