5 ದಿನದ ಸಂಷರ್ಘದ ಬಳಿಕ ಫೆಲೆಸ್ತೀನ್-ಇಸ್ರೇಲ್ ಮಧ್ಯೆ ಕದನ ವಿರಾಮ

ಜೆರುಸಲೇಂ, ಮೇ 14: ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು ಫೆಲೆಸ್ತೀನ್ ಮತ್ತು ಇಸ್ರೇಲ್ ಮಧ್ಯೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.
ಕಳೆದ 5 ದಿನಗಳಿಂದ ನಡೆಯುತ್ತಿದ್ದ ಸಂಘರ್ಷವನ್ನು ಕೈಬಿಡಲು ಉಭಯ ಕಡೆಯವರೂ ಸಮ್ಮತಿಸಿದ್ದು ಶನಿವಾರ ತಡರಾತ್ರಿಯಿಂದ ಕದನ ವಿರಾಮ ಜಾರಿಗೆ ಬಂದಿರುವುದಾಗಿ ಈಜಿಪ್ಟ್ ಘೋಷಿಸಿದೆ. ಕದನ ವಿರಾಮದ ಘೋಷಣೆ ಹೊರಬೀಳುತ್ತಿದ್ದಂತೆಯೇ ಜನತೆ ಬೀದಿಗಿಳಿದು ಹರ್ಷೋದ್ಗಾರ ಮಾಡಿ, ತಮ್ಮ ವಾಹನಗಳ ಹಾರನ್ ಅನ್ನು ಮೊಳಗಿಸಿ ಸಂಭ್ರಮಿಸಿದರು ಎಂದು ‘ದಿ ರಾಯ್ಟರ್ಸ್’ ವರದಿ ಮಾಡಿದೆ.
ಎರಡೂ ಕಡೆಯವರು ಕದನ ವಿರಾಮಕ್ಕೆ ಬದ್ಧರಾಗಿರುತ್ತಾರೆ. ಇದರಿಂದ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುವುದು, ಮನೆ ಧ್ವಂಸ ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಿ ನಡೆಸುವ ದಾಳಿಯು ತಕ್ಷಣವೇ ಅಂತ್ಯಗೊಳ್ಳುತ್ತದೆ ಎಂದು ಈಜಿಪ್ಟ್ ಘೋಷಿಸಿದೆ.
ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಅಲ್-ಸಿಸಿ ಅವರ ಪ್ರಯತ್ನಕ್ಕೆ ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಲಹೆಗಾರರು ಧನ್ಯವಾದ ಅರ್ಪಿಸಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಥನ್ಯಾಹು ಅವರ ಹೇಳಿಕೆ ತಿಳಿಸಿದೆ.
‘ಮೌನಕ್ಕೆ ಮೌನವೇ ಉತ್ತರವಾಗಿರುತ್ತದೆ. ಆದರೆ ಒಂದು ವೇಳೆ ಇಸ್ರೇಲ್ ಅನ್ನು ಗುರಿಯಾಗಿಸಿದರೆ ಅಥವಾ ಬೆದರಿಸಿದರೆ, ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುವುದನ್ನು ಮುಂದುವರಿಸಲಿದೆ’ ಎಂದು ಹೇಳಿಕೆ ತಿಳಿಸಿದೆ.
ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರ ಪಡೆಯೂ ಒಪ್ಪಂದವನ್ನು ದೃಢಪಡಿಸಿದೆ. ‘ಈಜಿಪ್ಟ್ನ ಘೋಷಣೆಗೆ ನಮ್ಮ ಸಮ್ಮತಿಯನ್ನು ಘೋಷಿಸುತ್ತೇವೆ ಮತ್ತು ಆಕ್ರಮಣಕಾರರು(ಇಸ್ರೇಲ್) ಅದನ್ನು ಪಾಲಿಸುವವರೆಗೂ ನಾವು ಕೂಡಾ ಪಾಲಿಸುತ್ತೇವೆ’ ಎಂದು ಪಡೆಯ ವಕ್ತಾರರರು ಹೇಳಿಕೆ ನೀಡಿದ್ದಾರೆ.
ಕದನ ವಿರಾಮ ಅಂತಿಮಗೊಳ್ಳುತ್ತಿದ್ದರೂ ಉಭಯ ಕಡೆಯವರು ಗುಂಡಿನ ದಾಳಿ ನಡೆಸುತ್ತಿದ್ದರು. ಇಸ್ರೇಲ್ನ ಟೆಲ್ಅವೀವ್ ನಗರದ ಸುತ್ತಮುತ್ತ ವಾಯುದಾಳಿಯ ಎಚ್ಚರಿಕೆ ನೀಡುವ ಸೈರನ್ ಸದ್ದು ಕೇಳಿಸುತ್ತಿತ್ತು. ಫೆಲೆಸ್ತೀನ್ ಸಶಸ್ತ್ರ ಪಡೆಯ ರಾಕೆಟ್ ದಾಳಿಗೆ ಪ್ರತಿಯಾಗಿ ಸಶಸ್ತ್ರ ಪಡೆಯ ನೆಲೆಯನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿರುವುದಾಗಿ ಇಸ್ರೇಲ್ನ ಮಿಲಿಟರಿ ಘೋಷಿಸಿದೆ.
ಐದು ದಿನಗಳ ಸಂಷರ್ಘದಲ್ಲಿ ಇಸ್ರೇಲ್ ಪಡೆ ಫೆಲೆಸ್ತೀನ್ ಸಶಸ್ತ್ರ ಹೋರಾಟಪಡೆಯ 6 ಉನ್ನತ ಕಮಾಂಡರ್ ಗಳನ್ನು ಹತ್ಯೆ ಮಾಡಿದ್ದರೆ, ಮಹಿಳೆಯರು ಹಾಗೂ ಮಕ್ಕಳ ಸಹಿತ ಕನಿಷ್ಟ 10 ನಾಗರಿಕರು ಗಾಝಾ ಪಟ್ಟಿಯಲ್ಲಿ ಮೃತರಾಗಿದ್ದರು. ಇಸ್ರೇಲ್ ನತ್ತ ನಡೆದ ರಾಕೆಟ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಕದನ ವಿರಾಮ ಘೋಷಣೆಯಾಗಿದ್ದರೂ, ಈ ಹಿಂದಿನಂತೆ ಮತ್ತೊಂದು ಸುತ್ತಿನ ಘರ್ಷಣೆ ಸ್ಫೋಟಗೊಳ್ಳಬಹುದು ಎಂದು ಗಾಝಾ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕದನ ವಿರಾಮ ತತ್ವಗಳ ಆಧಾರದ ಮೇಲೆ ಇರಬೇಕೆಂದು ಬಯಸುವುದಾಗಿ ಸ್ಥಳೀಯರು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.







