ಇಮ್ರಾನ್ ಪಕ್ಷದ ಬೆಂಬಲಿಗರು ರಾಜಕೀಯ ಭಯೋತ್ಪಾದಕರು: ಭುಟ್ಟೊ ಟೀಕೆ

ಇಸ್ಲಮಾಬಾದ್, ಮೇ 14: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ ಪ್ರತಿಭಟನೆಯಲ್ಲಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ, ಇಮ್ರಾನ್ ಅವರ ಪಿಟಿಐ ಪಕ್ಷದ ಬೆಂಬಲಿಗರನ್ನು ‘ರಾಜಕೀಯ ಭಯೋತ್ಪಾದಕರು’ ಎಂದು ಟೀಕಿಸಿದ್ದಾರೆ.
‘ರಾಜಕೀಯ ಭಯೋತ್ಪಾದಕ’ರೊಂದಿಗೆ ಮಾತುಕತೆ ಹೇಗೆ ಸಾಧ್ಯ ? ಎಂದು ಭುಟ್ಟೊ ಪ್ರಶ್ನಿಸಿರುವುದಾಗಿ ‘ದಿ ಡಾನ್’ ವರದಿ ಮಾಡಿದೆ. ನಾವು ಯಾವಾಗಲೂ ಮಾತುಕತೆಗಳನ್ನು ಬೆಂಬಲಿಸುತ್ತೇವೆ ಮತ್ತು ಅದಕ್ಕಾಗಿ ನಮ್ಮ ಮಿತ್ರಪಕ್ಷಗಳಿಗೆ ಮನವರಿಕೆ ಮಾಡಿದ್ದೇವೆ. ಆದರೆ ನಾವು ಭಯೋತ್ಪಾದಕರೊಂದಿಗೆ ಹೇಗೆ ಮಾತುಕತೆ ನಡೆಸಬಹುದು? ಭಯೋತ್ಪಾದನೆಯನ್ನು ಖಂಡಿಸುವ ಮತ್ತು ಈ ರಾಜಕೀಯ ಭಯೋತ್ಪಾದಕರಿಂದ ದೂರ ಇರುವವರೊಂದಿಗೆ ಮಾತ್ರ ಮಾತುಕತೆ ನಡೆಸಲು ಸಾಧ್ಯ ಎಂದವರು ಹೇಳಿದ್ದಾರೆ.
ನ್ಯಾಯಾಂಗವು ಅಗತ್ಯಕ್ಕಿಂತ ಹೆಚ್ಚು ರಾಜಕೀಯವಾಗುತ್ತಿದೆ ಎಂದ ಭುಟ್ಟೊ ಇಮ್ರಾನ್ಗೆ ಹಲವು ಪ್ರಕರಣಗಳಲ್ಲಿ ಜಾಮೀನು ಮಂಜೂರುಗೊಳಿಸಿರುವುದನ್ನು ಖಂಡಿಸಿದರು. ನಾವು ರಾಜಕೀಯವನ್ನು ಪುನಃಸ್ಥಾಪಿಸಿದಾಗ ನ್ಯಾಯಾಂಗವು ಅಗತ್ಯಕ್ಕಿಂತ ಹೆಚ್ಚು ರಾಜಕೀಯವಾಗುತ್ತದೆ, ಆದರೆ ಸರ್ವಾಧಿಕಾರ ಇದ್ದಾಗ ಅವರು(ನ್ಯಾಯಾಂಗ) ಮೌನವಾಗುತ್ತಾರೆ. ನ್ಯಾಯಾಂಗವು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಆಗ್ರಹಿಸಿದರು.
ಇಮ್ರಾನ್ ಬಂಧನದ ಬಳಿಕ ದೇಶದಾದ್ಯಂತ 3 ದಿನ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಿಟಿಐ(ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್) ಪಕ್ಷವನ್ನು ನಿಷೇಧಿಸುವ ಹೊರತು ಬೇರೆ ಆಯ್ಕೆಯಿಲ್ಲ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ಸಶಸ್ತ್ರ ಗುಂಪುಗಳ ವಿರುದ್ಧ ದೃಢ ನಿಲುವು ಹೊಂದುವುದು ಅಗತ್ಯವಾಗಿದೆ. ದೇಶದಲ್ಲಿ ಅವ್ಯವಸ್ಥೆ ಮತ್ತು ಅರಾಜಕತೆಯನ್ನು ಹರಡುವುದು ಪಿಟಿಐ ಮುಖ್ಯಸ್ಥ ಇಮ್ರಾನ್ ಅವರ ಏಕೈಕ ಉದ್ದೇಶವಾಗಿದೆ. ಪ್ರತಿಭಟನೆಯ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ನಷ್ಟಕ್ಕೆ ಪಿಟಿಐ ಪಕ್ಷವೇ ಹೊಣೆಯಾಗಿದೆ. ದುಷ್ಕರ್ಮಿಗಳನ್ನು ಸಿಸಿಟಿವಿ ದೃಶ್ಯಾವಳಿ ಮೂಲಕ ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.