ಸುಡಾನ್ ನಲ್ಲಿ ಮಾನವೀಯ ಪರಿಸ್ಥಿತಿ ಕೆಟ್ಟದಾಗಿದೆ: ವರದಿ

ನ್ಯೂಯಾರ್ಕ್, ಮೇ 14: ಸರಕಾರವು ದೇಶದಲ್ಲಿನ ಭದ್ರತಾ ಪರಿಸ್ಥಿತಿಯ ಮೇಲಿನ ನಿಯಂತ್ರಣವನ್ನು ಉಳಿಸಿಕೊಂಡಿದ್ದರೂ, ಸಂಘರ್ಷದಿಂದ ಜರ್ಝರಿತಗೊಂಡಿರುವ ದೇಶದಿಂದ ನಿರಾಶ್ರಿತರ ಪಲಾಯನ ಮುಂದುವರಿದಿದ್ದು ಮಾನವೀಯ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಅಲ್ಲಿ ಮಾನವೀಯ ನೆರವಿನ ಅಗತ್ಯವಿರುವ ಜನರ ಸಂಖ್ಯೆ ಹೆಚ್ಚಿದೆ ಎಂದು ವಿಶ್ವಸಂಸ್ಥೆಗೆ ಸುಡಾನ್ನ ರಾಯಭಾರಿ ಎಲ್-ಹರಿತ್ ಇದ್ರಿಸ್ರನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಸುಡಾನ್ ರಾಯಭಾರಿ ಇದ್ರಿಸ್ ‘ ಅರೆಸೇನಾ ಪಡೆ(ರ್ಯಾಪಿಡ್ ಸಪೋರ್ಟ್ ಫೋರ್ಸ್)ಯು ಸೇನೆಯ ವಿರುದ್ಧ ಬಂಡೆದಿದ್ದರೂ ದೇಶದ ಮೇಲೆ ನಿಯಂತ್ರಣ ಸಾಧಿಸಲು ವಿಫಲವಾಗಿದೆ.
ಈಗ ಅಲ್ಲಿ ಸಾಗುತ್ತಿರುವ ಸಂಘರ್ಷದಲ್ಲಿ ಸರಕಾರ ಮತ್ತು ಅದರ ಸಶಸ್ತ್ರ ಪಡೆ ಮೇಲುಗೈ ಸಾಧಿಸಿದೆ ಮತ್ತು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿಲ್ಲ ಅಥವಾ ಸಂವಹನ ಮಾರ್ಗಕ್ಕೆ ಅಡ್ಡಿಯಾಗಿಲ್ಲ ’ ಎಂದಿದ್ದಾರೆ.
ಸೇನಾಪಡೆ ಮತ್ತು ಅರೆಸೇನಾ ಪಡೆ ನಡುವೆ ಸೌದಿ ಅರೇಬಿಯಾದಲ್ಲಿ ನಡೆದ ಶಾಂತಿ ಮಾತುಕತೆಯು ಸಂಘರ್ಷ ಅಂತ್ಯಗೊಳಿಸಿ ಶಾಶ್ವತ ಕದನ ವಿರಾಮ ರೂಪಿಸಲು ವಿಫಲವಾಗಿದೆ.