ಐಪಿಎಲ್: ಚೆನ್ನೈ ಕಿಂಗ್ಸ್ ವಿರುದ್ಧ ಕೆಕೆಆರ್‌ಗೆ ಜಯ
ನಿತಿಶ್ ರಾಣಾ, ರಿಂಕು ಸಿಂಗ್ ಅರ್ಧಶತಕ

ಚೆನ್ನೈ, ಎ.14: ನಾಯಕ ನಿತಿಶ್ ರಾಣಾ(ಔಟಾಗದೆ 57 ರನ್,44 ಎಸೆತ) ಹಾಗೂ ರಿಂಕು ಸಿಂಗ್(54 ರನ್, 43 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್‌ನ 61ನೇ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 145 ರನ್ ಗುರಿ ಪಡೆದ ಕೆಕೆಆರ್ 18.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 147 ರನ್ ಗಳಿಸಿತು. ಚೆನ್ನೈ ಪರ ದೀಪಕ್ ಚಹಾರ್(3-27)ಯಶಸ್ವಿ ಬೌಲರ್ ಎನಿಸಿಕೊಂಡರು. ರಾಣಾ ಹಾಗೂ ರಿಂಕಿ ಸಿಂಗ್ 4ನೇ ವಿಕೆಟ್‌ಗೆ 99 ರನ್ ಜೊತೆಯಾಟ ನಡೆಸಿ ಇನ್ನೂ 9 ಎಸೆತ ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಆಲ್‌ರೌಂಡರ್ ಶಿವಂ ದುಬೆ(ಔಟಾಗದೆ 48 ರನ್, 34 ಎಸೆತ)ಏಕಾಂಗಿ ಹೋರಾಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿತು.
ಕೆಕೆಆರ್‌ನ ಸ್ಪಿನ್ ಬೌಲರ್‌ಗಳಾದ ಸುನೀಲ್ ನರೇನ್(2-15) ಹಾಗೂ ವರುಣ್ ಚಕ್ರವರ್ತಿ(2-36)ತಲಾ ಎರಡು ವಿಕೆಟ್‌ಗಳನ್ನು ಪಡೆದು ಚೆನ್ನೈ ತಂಡವನ್ನು 150ರೊಳಗೆ ನಿಯಂತಿಸುವಲ್ಲಿ ಸಫಲರಾದರು.
ಚೆನ್ನೈ ಪರ ಅಗ್ರ ಕ್ರಮಾಂಕದಲ್ಲಿ ಡೆವೊನ್ ಕಾನ್ವೆ(30 ರನ್, 28 ಎಸೆತ), ರವೀಂದ್ರ ಜಡೇಜ(20 ರನ್, 24 ಎಸೆತ), ಋತುರಾಜ್ ಗಾಯಕ್ವಾಡ್(17 ರನ್, 13 ಎಸೆತ) ಹಾಗೂ ಅಜಿಂಕ್ಯ ರಹಾನೆ(16 ರನ್, 11 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಚೆನ್ನೈ ತಂಡ ಒಂದು ಹಂತದಲ್ಲಿ 72 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಶಿವಂ ದುಬೆ ಹಾಗೂ ಜಡೇಜ 6ನೇ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಇದಕ್ಕೂ ಮೊದಲು ಕಾನ್ವೇ ಹಾಗೂ ಗಾಯಕ್ವಾಡ್ ಮೊದಲ ವಿಕೆಟ್‌ಗೆ 31 ರನ್ ಸೇರಿಸಿದರು. ಗಾಯಕ್ವಾಡ್ ಔಟಾದ ನಂತರ ಅಜಿಂಕ್ಯ ರಹಾನೆ(16 ರನ್)ಜೊತೆ 2ನೇ ವಿಕೆಟ್‌ಗೆ 30 ರನ್ ಸೇರಿಸಿದ ಕಾನ್ವೇ ತಂಡವನ್ನು ಆಧರಿಸಿದರು.