ಕರ್ನಾಟಕ ವಿಧಾನಸಭೆ ಗೆಲುವು: 3 ರಾಜ್ಯಸಭಾ ಸ್ಥಾನ ಉಳಿಸಿಕೊಳ್ಳಲಿರುವ ಕಾಂಗ್ರೆಸ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿರುವ ಭರ್ಜರಿ ಗೆಲುವಿನಿಂದಾಗಿ ಪಕ್ಷ ರಾಜ್ಯಸಭೆಯ ಮೂರೂ ಸ್ಥಾನಗಳನ್ನು ಉಳಿಸಿಕೊಳ್ಳಲಿದೆ; ಮಾತ್ರವಲ್ಲದೇ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಕಾಂಗ್ರೆಸ್ ಸದಸ್ಯರ ಬಲ ಐದರಿಂದ ಏಳಕ್ಕೇರಲಿದೆ. ಇದಕ್ಕೆ ವಿರುದ್ಧವಾಗಿ 2026ರ ಮಧ್ಯಭಾಗದ ವೇಳೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡವರ ಅಧಿಕಾರಾವಧಿ ಮುಗಿದ ಬಳಿಕ ರಾಜ್ಯಸಭೆಯಲ್ಲಿ ಜೆಡಿಎಸ್‌ನ ಪ್ರಾತಿನಿಧ್ಯ ಇರುವುದಿಲ್ಲ.
2024ರಲ್ಲಿ ನಿವೃತ್ತರಾಗಲಿರುವ ನಾಲ್ವರು ಸದಸ್ಯರ ಪೈಕಿ ಬಿಜೆಪಿಯ ಏಕೈಕ ಸದಸ್ಯರು ಇದ್ದು, ಈ ಸ್ಥಾನವನ್ನು ಬಿಜೆಪಿ ಉಳಿಸಿಕೊಳ್ಳಲಿದೆ. ಆದರೆ 2026ರಲ್ಲಿ ಪಕ್ಷದ ಬಲ ಕುಸಿಯಲಿದೆ. ರಾಜ್ಯಸಭೆಯಲ್ಲಿ 92 ಸದಸ್ಯರನ್ನು ಹೊಂದಿರುವ ಬಿಜೆಪಿಗೆ, ಕರ್ನಾಟಕ ವಿಧಾನಸಭಾ ಚುನಾವಣೆ ಸೋಲಿನಿಂದ ರಾಜ್ಯಸಭೆಯಲ್ಲಿ ದೊಡ್ಡ ನಷ್ಟ ಆಗದಿದ್ದರೂ, ರಾಜ್ಯಸಭೆಯಲ್ಲಿ ಬಹುಮತ ಸಾಧಿಸುವ ಆ ಪಕ್ಷದ ಕನಸಿಗೆ ಅಡ್ಡಿಯಾಗಲಿದೆ.
ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ಎಲ್.ಹನುಮಂತಯ್ಯ, ಸೈಯದ್ ನಸೀರ್ ಹುಸೈನ್ ಮತ್ತು ಜಿ.ಸಿ.ಚಂದ್ರಶೇಖರ್ ಸೇರಿ ನಾಲ್ಕು ಮಂದಿ ಸದಸ್ಯರು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಅಂತೆಯೇ 2026 ಹಾಗೂ 2028ರಲ್ಲಿ ಕೂಡಾ ತಲಾ ನಾಲ್ವರು ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದೆ.
ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಸ್ಥಾನಗಳು ಹಾಗೂ ಎರಡು ನಾಮ ನಿರ್ದೇಶಿತ ಸದಸ್ಯ ಸ್ಥಾನಗಳು ಖಾಲಿ ಇದ್ದು, ರಾಜ್ಯಸಭೆಯ ಒಟ್ಟು ಬಲ239ಕ್ಕೆ ಕುಸಿದಿದೆ. 92 ಸಂಸದರನ್ನು ಹೊಂದಿರುವ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು, ಕಾಂಗ್ರೆಸ್ 31, ಟಿಎಂಸಿ 13, ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷ ತಲಾ 10, ಬಿಜು ಜನತಾದಳ ಮತ್ತು ವೈಎಸ್‌ಆರ್ ಕಾಂಗ್ರೆಸ್ ತಲಾ ಒಂಬತ್ತು ಸದಸ್ಯರನ್ನು ಹೊಂದಿವೆ. ತೆಲಂಗಾಣ ರಾಷ್ಟ್ರೀಯ ಸಮಿತಿ (7) ಮತ್ತು ರಾಷ್ಟ್ರೀಯ ಜನತಾದಳ (6) ಕೂಡಾ ಗಣನೀಯ ಸಂಖ್ಯೆಯ ಸದಸ್ಯರನ್ನು ಹೊಂದಿವೆ.