ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಹಿಜಾಬ್ ನಿಷೇಧ ಕೈಬಿಡಲಿದೆಯೆಂಬ ವಿಶ್ವಾಸ ಇದೆ: ಶಾಸಕಿ ಕನೀಝ್ ಫಾತಿಮಾ

ಬೆಂಗಳೂರು: ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೇರಲಾಗಿರುವ ಹಿಜಾಬ್ ನಿಷೇಧವನ್ನು ಕಾಂಗ್ರೆಸ್ ಕೈಬಿಡಲಿದೆ ಎಂಬ ವಿಶ್ವಾಸ ಇದೆ ಎಂದು ಕಲಬುರಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ವಿಜೇತರಾಗಿರುವ ರಾಜ್ಯದ ಏಕೈಕ ಮುಸ್ಲಿಮ್ ಶಾಸಕಿ ಕನೀಝ್ ಫಾತಿಮಾ scroll.inಗೆ ತಿಳಿಸಿದ್ದಾರೆ. ಫಾತಿಮಾ ಅವರು ಬಿಜೆಪಿಯ ಚಂದ್ರಕಾಂತ್ ಬಿ ಪಾಟೀಲ್ ಅವರನ್ನು 2,712 ಮತಗಳ ಅಂತರದಿಂದ ಸೋಲಿಸಿದ್ದಾರೆ.
“ದೇವರು ಇಚ್ಛಿಸಿದರೆ ನಾವು ಮುಂದಿನ ದಿನಗಳಲ್ಲಿ ಹಿಜಾಬ್ ನಿಷೇಧ ಕೈಬಿಡಲಿದ್ದೇವೆ ಹಾಗೂ ಈ ನಿಷೇಧದಿಂದ ಶಾಲೆಗಳಿಂದ ದೂರುವುಳಿದಿರುವ ಬಾಲಕಿಯರನ್ನು ಮರಳಿ ಶಾಲೆಗೆ ತರಲು ನಮಗೆ ಸಾಧ್ಯವಾಗಬಹುದು. ನಾವು ಎರಡು ಅಮೂಲ್ಯ ವರ್ಷಗಳನ್ನು ಕಳೆದುಕೊಂಡಿದ್ದೇವೆ,” ಎಂದು ಫಾತಿಮಾ ಹೇಳಿದ್ದಾರೆ.
ಆದರೆ ಹಿಜಾಬ್ ಕುರಿತಂತೆ ಕಾಂಗ್ರೆಸ್ ಪಕ್ಷ ಚುನಾವಣೆಯ ವೇಳೆ ಎಲ್ಲಿಯೂ ಉಲ್ಲೇಖಿಸಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದನ್ನೂ ಓದಿ: ವಿಧಾನಸಭೆ ಪ್ರವೇಶಿಸಿದ 8 ಮಂದಿ ಮಹಿಳೆಯರು
ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಶ್ರೇಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ ಫಾತಿಮಾ, ಖರ್ಗೆ ಅವರು ಪಕ್ಷದ ಅಧ್ಯಕ್ಷರಾದಂದಿನಿಂದ ನಾವು ಬಹಳ ಕಷ್ಟಪಟ್ಟು ಪಕ್ಷಕ್ಕಾಗಿ ಶ್ರಮಿಸಿದ್ದೇವೆ. ಅವರ ಭಾಷಣಗಳು ಜನರ ಮೇಲೆ ದೊಡ್ಡ ಪರಿಣಾಮ ಬೀರಿವೆ, ಅದರ ಫಲಿತಾಂಶ ಈಗ ನಮ್ಮ ಮುಂದೆ ಇದೆ” ಎಂದು ಹೇಳಿದರು.
ಫಾತಿಮಾ 2018ರಲ್ಲಿ ಕೂಡ ಸ್ಪರ್ಧಿಸಿದ್ದರು, ಅವರ ಪತಿ ಖಮರ್-ಉಲ್-ಇಸ್ಲಾಂ ಸೆಪ್ಟೆಂಬರ್ 2017ರಲ್ಲಿ ನಿಧನರಾದ ನಂತರ ಅವರು ಚುನಾವಣೆ ಸ್ಪರ್ಧಿಸಿದ್ದರು. ಕಲಬುರಗಿಯಲ್ಲಿ ಅವರು ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು.







