ವಿಜಯೋತ್ಸವದಲ್ಲಿ ಬೆದರಿಕೆ ಹಾಕಿದ ಶಾಸಕ ಸುನೀಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ: ಕಾಂಗ್ರೆಸ್ ಒತ್ತಾಯ

ಕಾರ್ಕಳ : ವಿಜಯೋತ್ಸವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ವಕ್ತಾರ ಶುಭದ ರಾವ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ವಿರುದ್ಧ ಕೆಲಸ ಮಾಡಿದವರನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿರುವ ಶಾಸಕ ಸುನೀಲ್ ಕುಮಾರ್ ಅವರ ಮಾತುಗಳು ಹತಾಶೆಯ ಪ್ರತೀಕವಾಗಿದೆ. ಬೆದರಿಕೆಗಳಿಗೆ ಹೆದರುವ ಕಾರ್ಯಕರ್ತರು ನಾವಲ್ಲ. ನಿಮ್ಮ ಎದುರಿಸುವ ಶಕ್ತಿ ನಮ್ಮಲ್ಲಿದೆ. ಆದರೆ ಇನ್ನು ಮಾತನಾಡುವಾಗ ಎಚ್ಚರವಿರಲಿ ಎಂದರು.
ಮಾತಿನಲ್ಲಿ ನಾವು ಯಾರೂ ಸಭ್ಯತೆ ಮೀರಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ, ಆದರೆ ಗೋಪಾಲ ಭಂಡಾರಿಯವರ ಬಗ್ಗೆ ಅವಹೇಳನವಾಗಿ ಮಾತನಾಡುವಾಗ, ಬಂಡಿಮಠದಲ್ಲಿ ಹಗಲು ರಾತ್ರಿ ಧರಣಿ ಮಾಡಿ ವೀರಪ್ಪ ಮೊಯಿಲಿಯವರನ್ನು ಹೀಯಾಳಿಸಿದಾಗ, ಸಿದ್ದರಾಮಯ್ಯ ಸೆಗಣಿ ತಿನ್ನಿ ಎಂದಾಗ ಕಾಂಗ್ರೆಸ್ಸಿಗರು ನಪುಂಸಕರು ಎಂದಾಗ ನಿಮ್ಮ ಸಭ್ಯತೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಅಜಿತ್ ಹೆಗ್ಡೆ , ಹೇಮಂತ್ ಆಚಾರ್ಯ ಉಪಸ್ಥತಿತರಿದ್ದರು.