ಕುಂದಾಪುರ | ಕ್ಷುಲ್ಲಕ ವಿಚಾರಕ್ಕೆ ಜಗಳ: ವ್ಯಕ್ತಿಯ ಕೊಲೆಯಲ್ಲಿ ಅಂತ್ಯ
ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿನಮಕ್ಕಿ ಎಂಬಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಬಾಗಲಕೋಟೆ ಮೂಲದ ಸಂಗಪ್ಪ ಅಲಿಯಾಸ್ ಸಂಗಮೇಶ (42) ಎಂದು ಗುರುತಿಸಲಾಗಿದೆ. ಈತನೊಂದಿಗೆ ಇದ್ದ ಇನ್ನೋರ್ವ ವಲಸೆ ಕಾರ್ಮಿಕ ಮಂಡ್ಯ ಮೂಲದ ರಾಜಾ (36) ಕೊಲೆ ಮಾಡಿದ ಆರೋಪಿ.
ಕುಂದಾಪುರದಲ್ಲಿ ನೆಲೆಸುತ್ತಿದ್ದ ವಲಸೆ ಕಾರ್ಮಿಕರಾಗಿದ್ದ ಸಂಗಪ್ಪ ಹಾಗೂ ರಾಜಾ ಕೆಲಸವಿದ್ದಾಗ ತೆರಳಿದ್ದಲ್ಲಿಯೇ ಉಳಿಯುತ್ತಿದ್ದರು. ಅಂತೆಯೇ ಆಲೂರು ಗ್ರಾ.ಪಂ ವ್ಯಾಪ್ತಿಯ ಕಟ್ಟಿನಮಕ್ಕಿಯ ಗುತ್ತಿಗೆದಾರ ನಾಗೇಂದ್ರ ಆಚಾರ್ಯ ಎಂಬವರ ಬಳಿ ಕೆಲಸ ಮಾಡುತ್ತಿದ್ದ ರಾಜಾ, ಸಂಗಪ್ಪ ಹಾಗೂ ಸಂಗಡಿಗರು ನಾಗೇಂದ್ರ ಅವರ ಮನೆ ಎದುರು ನಿರ್ಮಾಣವಾಗುತ್ತಿದ್ದ ಮನೆಯ ಬಳಿಯ ಶೆಡ್ ನಲ್ಲಿ ಉಳಿದಿದ್ದರು. ಈ ವೇಳೆ ಮದ್ಯ ಸೇವಿಸಿದ್ದ ರಾಜಾ ಹಾಗೂ ಸಂಗಪ್ಪ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದ್ದು, ಶೆಡ್ ಎದುರಿನ ಮನೆ ಪಂಚಾಂಗದ ಮೇಲೆ ಮಲಗಿದ್ದ ಸಂಗಪ್ಪನ ತಲೆಯ ಮೇಲೆ ರಾಜಾ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ. ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ದಣಿಯ ಮನೆಗೆ ಬಂದು ಮಾಹಿತಿ ನೀಡಿದ್ದು ಆತನನ್ನು ಹಿಡಿದಿಟ್ಟುಕೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ, ಗಂಗೊಳ್ಳಿ ಠಾಣೆಯ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ತನಿಖಾ ವಿಭಾಗದ ಪಿಎಸ್ಐ ಜಯಶ್ರೀ ಹೊನ್ನೂರು, ಕೊಲ್ಲೂರು ಠಾಣೆ ತನಿಖಾ ಪಿಎಸ್ಐ ಸುಧಾರಾಣಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಫಾರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗಂಗೊಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.