ಮಂಗಳೂರು: ಚಿನ್ನಾಭರಣ ಸುಲಿಗೆ ಆರೋಪ; ಪ್ರಕರಣ ದಾಖಲು

ಮಂಗಳೂರು, ಮೇ 15: ನಗರದ ಜಿಎಚ್‌ಎಸ್ ರಸ್ತೆಯ ಖಾಸಗಿ ಕ್ಲಿನಿಕ್‌ನ ಬಳಿ ವ್ಯಕ್ತಿಯೊಬ್ಬರ ಚಿನ್ನಾಭರಣ ಸುಲಿಗೆ ಮಾಡಿರುವ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 12ರಂದು ತನ್ನ ಮಗ ರಿಶಬ್ ಸೂರ್ಯನ್ನು ಚಿಕಿತ್ಸೆಗಾಗಿ ಜಿಎಚ್‌ಎಸ್ ರಸ್ತೆಯಲ್ಲಿರುವ ಕ್ಲಿನಿಕ್‌ಗೆ ರಾತ್ರಿ 7:30ಕ್ಕೆ ಕರೆದುಕೊಂಡು ಹೋಗಿ ಹೊರರೋಗಿ ವಿಭಾಗದಿಂದ ಮರಳುವಾಗ ಒಬ್ಬ ವ್ಯಕ್ತಿ ತನ್ನನ್ನು ಬಲವಾಗಿ ಹಿಡಿದಿದ್ದು, ಇನ್ನೊಬ್ಬ ವ್ಯಕ್ತಿ ತನ್ನ ಬಲಗೈಯಲ್ಲಿದ್ದ ಸುಮಾರು 22.50 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುವುದಾಗಿ ಸತೀಶ್ ರಾವ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.
ಇದರ ಬೆಲೆ ಸುಮಾರು 1.35 ಲಕ್ಷ ರೂ. ಆಗಿದ್ದು, ಸುಲಿಗೆ ಮಾಡುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಘಟನೆಯಿಂದ ತನಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವೆ. ಈ ವ್ಯಕ್ತಿಗಳ ಮುಖ ಚಹರೆಗಳನ್ನು ಗಮನಿಸಿದಾಗ ತನ್ನ ಪರಿಚಯದ ಗೋವಿಂದರಾಜ್ ನಾಯಕ್ ಮತ್ತವರ ಮಗ ಗಿರೀಶ್ ನಾಯ್ಕ್ ಎಂದು ತಿಳಿದು ಬಂದಿರುತ್ತದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಸತೀಶ್ ರಾವ್ ತಿಳಿಸಿದ್ದಾರೆ.