ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7 ಕಿ.ಮೀ. ನಡೆದುಕೊಂಡು ಹೋದ ಗರ್ಭಿಣಿ ಬಿಸಿಲ ತಾಪದಿಂದ ಸಾವು
ಹೊಸದಿಲ್ಲಿ, ಮೇ 15: ತನ್ನ ಗ್ರಾಮದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7 ಕಿ.ಮೀ. ನಡೆದುಕೊಂಡು ಹೋದ ಬುಡಕಟ್ಟು ಸಮುದಾಯಕ್ಕೆ ಸೇರಿದ 21 ವರ್ಷದ ಗರ್ಭಿಣಿಯೋರ್ವರು ಬಿಸಿಲ ತಾಪದಿಂದ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಗಾರ್ ನಲ್ಲಿ ನಡೆದಿದೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಡಹಾಣು ತಾಲೂಕಿನ ಒಸಾರ್ ವೀರಾ ಗ್ರಾಮದ ಗರ್ಭಿಣಿ ಸೋನಾಲಿ ವಾಘಟ್ ಅನಾರೋಗ್ಯದ ಹಿನ್ನೆಲೆಯಲ್ಲಿ ಟವಾ ಪ್ರಾಥರ್ಮಿಕ ಆರೋಗ್ಯ ಕೇಂದ್ರಕ್ಕೆ ತೆರಳಲು ಆಟೊ ರಿಕ್ಷಾ ಹಿಡಿಯಬೇಕಾಗಿದ್ದ ಸ್ಥಳದ ಸಮೀಪ ಇರುವ ಹೆದ್ದಾರಿಗೆ ತಲುಪುಲು ಶುಕ್ರವಾರ ಉರಿಯುವ ಬಿಸಿಲಿನಲ್ಲಿ 3.5 ಕಿ.ಮೀ. ನಡೆದುಕೊಂಡು ಹೋಗಿದ್ದಳು. ಅಲ್ಲಿಂದ ಆಟೊ ಹಿಡಿದು ಪ್ರಾಥಮಿಕ ಕೇಂದ್ರಕ್ಕೆ ತೆರಳಿದ್ದಳು.
ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಆಟೊದಲ್ಲಿ ಹೆದ್ದಾರಿಯ ಸಮೀಪದ ತಲುಪಿ ಅಲ್ಲಿಂದ ಸುಡು ಬಿಸಿಲಿನಲ್ಲಿ ಮತ್ತೆ 3.5 ಕಿ.ಮೀ. ನಡೆದು ಮನೆಗೆ ಹಿಂದಿರುಗಿದ್ದರು ಎಂದು ಪಾಲ್ಗಾರ್ ಜಿಲ್ಲೆಯ ಸಿವಿಲ್ ಸರ್ಜನ್ ಡಾ. ಸಂಜಯ್ ಬೊಡಾಡೆ ಅವರು ತಿಳಿಸಿದ್ದಾರೆ.
ಅಂದು ಸಂಜೆ ಅವರಲ್ಲಿ ಆರೋಗ್ಯ ಸಮಸ್ಯೆ ತಲೆದೋರಿತು. ಕೂಡಲೇ ಅವರು ಧುಂಡಲ್ವಾಡಿ ಪಿಎಚ್ಸಿಗೆ ತೆರಳಿದರು. ಅಲ್ಲಿಂದ ವೈದ್ಯರು ಅವರನ್ನು ಕಾಸಾ ಉಪ ವಿಭಾಗೀಯ ಆಸ್ಪತ್ರೆಗೆ ಶಿಫಾರಸು ಮಾಡಿದರು. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮುಂದಿನ ಚಿಕಿತ್ಸೆಗೆ ದಹಾಣುವಿನ ದುಂಡಲ್ವಾಡಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಪಾರಸು ಮಾಡಿದ್ದರು. ಆದರೆ, ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ಯುತ್ತಿರುವಾಗ ಅವರು ಹಾಗೂ ಅವರ ಗರ್ಭದಲ್ಲಿದ್ದ ಶಿಶು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.