ಹಿರಿಯರ ಕಡೆಗಣನೆ ಬಿಜೆಪಿ ಸೋಲಿಗೆ ಕಾರಣ: ಮಾಜಿ ಸಚಿವ ಅರವಿಂದ ಲಿಂಬಾವಳಿ

ಬೆಂಗಳೂರು, ಮೇ 15: ‘ಬಿಜೆಪಿಯಲ್ಲಿ ಹಿರಿಯರ ಕಡೆಗಣನೆ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಅನುಸರಿಸಿದಂತಹ ಏಕಪಕ್ಷೀಯ ಧೋರಣೆಯಿಂದಾಗಿ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ನಗರದ ಹೂಡಿ ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ಮಹದೇವಪುರ ಕ್ಷೇತ್ರದಿಂದ 44,501 ಮತಗಳ ಅಂತರಿಂದ ಚುನಾಯಿತರಾಗಿರುವ ಬಿಜೆಪಿಯ ನೂತನ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕಾರಣವಾಗಿರುವ ಅಂಶಗಳ ಕುರಿತು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಈ ಫಲಿತಾಂಶ ನಮ್ಮ ನಿರೀಕ್ಷೆಗೆ ವ್ಯತಿರಿಕ್ತವಾಗಿ ಬಂದಿದೆ. ಸಹಜವಾಗಿಯೆ, ಆಡಳಿತದಲ್ಲಿದ್ದ ಪಕ್ಷ ಇಷ್ಟೊಂದು ಕಡಿಮೆ ಸ್ಥಾನಗಳಿಗೆ ಸೀಮಿತವಾಗಿದ್ದು ಆಘಾತ ತಂದಿದೆ. ಪಕ್ಷದ ಸಂಘಟನೆ ಹಾಗೂ ಸರಕಾರ ನಡೆಸಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಲಿಂಬಾವಳಿ ಹೇಳಿದರು.
ಮುಂಬರುವ ದಿನಗಳಲ್ಲಿ ಪಕ್ಷದ ನಾಯಕರು, ಈಗ ಆಗಿರುವಂತಹ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರೆಯಬೇಕಿದೆ ಎಂದು ಅವರು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ನೂತನ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಮಹದೇವಪುರ ಕ್ಷೇತ್ರದ ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿ, ಶುಭ ಕೋರಿದರು.