ಕಾಂಗ್ರೆಸ್ ನ ಉಚಿತ 'ಗ್ಯಾರಂಟಿ'ಗಳಿಗೆ ಷರತ್ತುಗಳು ಅನ್ವಯ: ಡಾ.ಜಿ ಪರಮೇಶ್ವರ್ ಸ್ಪಷ್ಟನೆ
ಬೆಂಗಳೂರು: ಕಾಂಗ್ರೆಸ್ ನ 'ಗ್ಯಾರಂಟಿ'ಗಳಿಗೆ ಷರತ್ತುಗಳನ್ನು ವಿಧಿಸಲಾಗುವುದು' ಎಂದು ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, 'ಸುಮ್ಮನೆ ಎಲ್ಲರಿಗೂ ಉಚಿತವಾಗಿ ಕೊಡಲು ಆಗಲ್ಲ, ಅದಕ್ಕೆ ಷರತ್ತುಗಳು ಇರಲಿವೆ, ಆಯಾ ಇಲಾಖೆ ಸಚಿವರ ಜೊತೆ ಚರ್ಚೆ ಮಾಡಿ ಅದನ್ನು ನಿರ್ಧರಿಸಲಾಗುವುದು, ಇಲ್ಲವಾದಲ್ಲಿ ಅದರ ದುರ್ಬಳಕೆ ಹೆಚ್ಚಾಗುತ್ತದೆ' ಎಂದು ತಿಳಿಸಿದರು.
' ಪ್ರಮುಖವಾಗಿ 5 ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಅದನ್ನು ಮೊದಲ ಕ್ಯಾಬಿನೆಟ್ ನಲ್ಲೇ ಈಡೇರಿಸೋ ಭರವಸೆ ಕೊಟ್ಟಿದ್ದೇವೆ, ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ ಎಂದ ಅವರು, ಗ್ಯಾರಂಟಿಗಳನ್ನ ಪ್ರಾಕ್ಟಿಕಲ್ ಆಗಿ ವರ್ಕ್ ಮಾಡಿ ಜಾರಿ ಮಾಡುತ್ತೇವೆ. ಹಾಗೇ ಸುಮ್ಮನೆ ಕೊಟ್ಟರೆ ಎಲ್ಲರೂ ತಗೋತಾರೆ. ಗ್ಯಾರಂಟಿಗಳಿಗೆ ಮಾನದಂಡ ಇರುತ್ತೆ' ಎಂದು ಹೇಳಿದರು.
ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಈ ಬಗ್ಗೆ ಹೈಕಮಾಂಡ್ ಪ್ರಕ್ರಿಯೆ ನಡೆಸುತ್ತಿದೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ದಿಲ್ಲಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಕುಳಿತು ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ನೀವು ಅಂದುಕೊಂಡ ಹಾಗೆ ದೊಡ್ಡ ಹೋರಾಟ ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧ್ಯಕ್ಷರಿಗೆ ಸ್ಥಾನ ಕೊಡಬೇಕು. ಇದು ಹಿಂದಿನಿಂದಲೂ ಇರುವ ಪದ್ಧತಿ. ಸಿದ್ದರಾಮಯ್ಯ ಸಿಎಲ್‍ಪಿ ಲೀಡರ್ ಆಗಿ ಕೆಲಸ ಮಾಡಿದ್ದಾರೆ. ಈ ಬಾರಿ ನಾವು ಸಾಮೂಹಿಕ ನಾಯಕತ್ವ ಎಂದು ಹೋಗಿದ್ದೆವು. ಈಗ ಅಧಿಕಾರ ಬಂದಿದೆ. ಹೈಕಮಾಂಡ್ ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡುತ್ತದೆ ಎಂದು ಪರಮೇಶ್ವರ್ ತಿಳಿಸಿದರು.