ಮಂಗಳೂರು: 476 ಹಜ್ ಯಾತ್ರಿಗಳಿಗೆ ಲಸಿಕೆ

ಮಂಗಳೂರು: ಸರಕಾರಗಳ ಅಧೀನ ಹಾಗೂ ಹಜ್ ಕಮಿಟಿಯ ಮೇಲುಸ್ತುವಾರಿಯಲ್ಲಿ ಪ್ರಸಕ್ತ (2023) ಸಾಲಿನಲ್ಲಿ ಹಜ್‌ಗೆ ತೆರಳುವ 476 ಯಾತ್ರಾರ್ಥಿಗಳಿಗೆ ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಯೆನೆಪೊಯ ಆಸ್ಪತ್ರೆಯಲ್ಲಿ ಮಂಗಳವಾರ ಲಸಿಕೆ (ಚುಚ್ಚುಮದ್ದು) ನೀಡಲಾಯಿತು.
ಇದರಲ್ಲಿ 222 ಪುರುಷರು ಮತ್ತು 254 ಮಹಿಳೆಯರು ಸೇರಿದ್ದಾರೆ. ಈ ಪೈಕಿ ತಲಾ ಇಬ್ಬರು ಉಡುಪಿ, ಚಿಕ್ಕಮಗಳೂರು ಹಾಗೂ ಮಹಾರಾಷ್ಟ್ರದವರಿದ್ದಾರೆ.
ಈ ಸಂದರ್ಭ ಮಾತನಾಡಿದ ಕೇಂದ್ರ ಹಜ್ ಕಮಿಟಿಯ ಅಧ್ಯಕ್ಷ ಅಬ್ದುಲ್ಲಾ ಕುಟ್ಟಿ ‘ ಈ ಬಾರಿ ದೇಶಾದ್ಯಂತ 25 ಎಂಬಾರ್ಕೇಶನ್ ಕೇಂದ್ರಗಳನ್ನು ಗುರುತಿಸಲಾಗಿತ್ತು. ಆ ಪೈಕಿ ಮಂಗಳೂರು ಕೂಡ ಒಂದಾಗಿದೆ. ಆದರೆ, ಎಂಬಾರ್ಕೇಶನ್‌ನ ಮಂಗಳೂರು ಕೇಂದ್ರವು ಕೈ ತಪ್ಪಿರುವುದು ನಮಗೆ ತುಂಬಾ ಬೇಸರ ತರಿಸಿದೆ. ಅರ್ಜಿ ಹಾಕುವ ಸಂದರ್ಭ ಎಂಬಾರ್ಕೇಶನ್ ಕೇಂದ್ರಗಳನ್ನು ಸರಿಯಾಗಿ ನಮೂದಿಸಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಮಂಗಳೂರು ಎಂಬಾರ್ಕೇಶನ್ ಕೇಂದ್ರದ ಮೂಲಕ ಯಾತ್ರೆ ಕೈಗೊಳ್ಳುವವರ ಸಂಖ್ಯೆ 300 ಕೂಡ ದಾಟಿಲ್ಲ. ಇದೇ ಕಾರಣದಿಂದ ಮಂಗಳೂರು ಕೇಂದ್ರ ಕೈ ತಪ್ಪಿದೆ ಎಂದರು.
ಮುಂದಿನ ವರ್ಷ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಹಜ್ ಯಾತ್ರಾರ್ಥಿಗಳು ಮಂಗಳೂರು ಎಂಬಾರ್ಕೇಶನ್ ಮೂಲಕ ತೆರಳಲು ಅರ್ಜಿ ಸಲ್ಲಿಸಬೇಕು. ಆವಾಗ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅಬ್ದುಲ್ಲಾ ಕುಟ್ಟಿ ಹೇಳಿದರು.
ಹಜ್ ಯಾತ್ರಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ‘ನಾಡಿನ ಶಾಂತಿ-ಸಾಮರಸ್ಯ, ಒಗ್ಗಟ್ಟಿಗಾಗಿ ಎಲ್ಲಾ ಯಾತ್ರಾರ್ಥಿಗಳು ವಿಶೇಷವಾಗಿ ಪ್ರಾರ್ಥಿಸಬೇಕು. ಮುಂದಿನ ಬಾರಿ ಯಾತ್ರಾರ್ಥಿಗಳು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ರಾಜ್ಯ ಹಜ್ ಕಮಿಟಿಯ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲಾ, ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ, ಯೆನೆಪೊಯ ಆಸ್ಪತ್ರೆಯ ಡಾ. ತ್ವಾಹಿರ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ರಾದ ಫಕೀರಬ್ಬ ಮಾಸ್ಟರ್, ಜಮಾಲ್, ದ.ಕ.ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಹನೀಫ್ ಹಾಜಿ ಬಂದರ್, ಮುಮ್ತಾಝ್ ಅಲಿ, ಅಝೀಝ್ ಬೈಕಂಪಾಡಿ, ಬಶೀರ್ ಬೈಕಂಪಾಡಿ, ಫಝಲುಲ್ ಹಕ್, ರಫೀಕ್ ಪುತ್ತೂರು, ರಿಯಾಝುದ್ದೀನ ಹಾಜಿ ಬಂದರ್, ಬಿ.ಎಸ್.ಬಶೀರ್, ಸಿ.ಎಚ್.ಉಳ್ಳಾಲ್, ಇಬ್ರಾಹೀಂ ಕೊಣಾಜೆ, ಸುಲೈಮಾನ್ ಕರಾಯ ಮತ್ತಿತರರು ಉಪಸ್ಥಿತರಿದ್ದರು.
ಕೋಡಿಯಾಲ್‌ಬೈಲ್ ಮಸೀದಿಯ ಖತೀಬ್ ಜಿ.ಎಂ. ಇಸ್ಮಾಯೀಲ್ ಮದನಿ ದುಆಗೈದರು. ಅಹ್ಮದ್ ಬಾವಾ ಪಡೀಲ್ ಕಾರ್ಯಕ್ರಮ ನಿರೂಪಿಸಿದರು.