ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ: ಶಾಸಕ ಅಶೋಕ್ ರೈ ಭರವಸೆ
ಪುತ್ತೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ಅಭಿವೃದ್ಧಿಯಲ್ಲಿ ನಾವು ರಾಜಕೀಯ ಮಾಡುವುದಿಲ್ಲ, ದ್ವೇಷದ ರಾಜಕಾರಣ ನನ್ನಲ್ಲಿಲ್ಲ. ಗ್ರಾಮ ಮಟ್ಟದಿಂದ ಅಭಿವೃದ್ಧಿ ಕೆಲಸಗಳು ಆರಂಭವಾಗಲಿದೆ. ಜನರ ಸಮಸ್ಯೆಗಳನ್ನು ಬೂತ್ ಮಟ್ಟದಲ್ಲೇ ಅರಿಯುವ ಕೆಲಸವನ್ನು ಗ್ರಾಮ ಮಟ್ಟದ ಮುಖಂಡರು ಮಾಡಬೇಕು. ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರನ್ನೂ ಅಭಿವೃದ್ಧಿಯ ಜೊತೆ ಸೇರಿಸಿಕೊಳ್ಳಬೇಕು. ಪಕ್ಷಕ್ಕಾಗಿ ನಾವು ಎಲ್ಲರೂ ಒಗ್ಗಟ್ಟಾಗಿ ದುಡಿಯ ಬೇಕಾಗಿದ್ದು ನಾಳೆಯಿಂದಲೇ ತಳಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮತ್ತೆ ಆರಂಭವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಮಂಗಳವಾರ ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪ್ರತಿಜ್ಞಾ ವಿಧಿ ಸ್ವೀಕಾರದ ಬಳಿಕ ಪುತ್ತೂರಿನಲ್ಲಿ ಅಧಿಕಾರಿಗಳ ಸಭೆಯನ್ನು ಕರೆಯುತ್ತೇನೆ. ಮಳೆಗಾಲ ಪ್ರಾರಂಭಗೊಂಡಿದ್ದು, ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಕಾರ್ಯಸೂಚಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದೇನೆ. ಪುತ್ತೂರಿನಲ್ಲಿ ಭೃಷ್ಟಾಚಾರ ಮುಕ್ತ ಆಡಳಿತವನ್ನು ನೀಡಲಿದ್ದು ಬಾಕಿ ಇರುವ ಕಡತಗಳನ್ನು ಗ್ರಾಮ ಮಟ್ಟದಲ್ಲೇ ಪರಿಹರಿಸಿ ಸ್ಥಳದಲ್ಲೇ ಸಾರ್ವಜನಿಕರಿಗೆ ನೀಡುವ ಕೆಲಸವನ್ನು ಮಾಡಲಿದ್ದೇನೆ. ಅಕ್ರಮ ಸಕ್ರಮ ಮತ್ತು 94ಸಿ ಹಕ್ಕುಪತ್ರವನ್ನುಗ್ರಾಮ ಮಟ್ಟದಲ್ಲೇ ವಿತರಣೆ ಮಾಡುವಕೆಲಸವನ್ನು ಮಾಡುತ್ತೇನೆ. ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದೇನೆ ಎಂದು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ ಪುತ್ತೂರಿನಲ್ಲಿ ಕಾಂಗ್ರೆಸ್ ದಿಗ್ವಿಜಯ ಆರಂಭವಾಗುತ್ತಿದ್ದಂತೆಯೇ ಪುತ್ತೂರಿನಲ್ಲಿ ಬಿಜೆಪಿಯವರ ಪ್ರತಿಭಟನೆ ನಾಟಕ ಆರಂಭವಾಗಿದೆ, ಬಿಜೆಪಿಯವರನ್ನು ಎದುರಿಸುವ ಶಕ್ತಿ ನಮಗಿದೆ. ಸ್ವಚ್ಚ ಪುತ್ತೂರು, ಭೃಷ್ಟಾಚಾರ ಮುಕ್ತ ಪುತ್ತೂರು ಆಗಲಿದೆ. ಪುತ್ತೂರಿನ ಜನತೆಗೆ ಕೊಟ್ಟ ಭರವಸೆಯನ್ನು ನಾವು ಖಂಡಿತಾ ಈಡೇರಿಸುತ್ತೇವೆ. ಪುತ್ತೂರಲ್ಲಿ ನಮ್ಮದೇ ಶಾಸಕರಿದ್ದು ರಾಜ್ಯದಲ್ಲಿ ನಮ್ಮದೇ ಸರಕಾರವೂ ಇದೆ ಎಂದು ಹೇಳಿದರು.
ಕಳೆದ ಹಲವು ವರ್ಷಗಳಿಂದ ಸೋತಿದ್ದ ಜಾತ್ಯಾತೀತ ಮನಸ್ಸುಗಳು ಕಾಂಗ್ರೆಸ್ ಗೆಲುವಿನಿಂದಾಗಿ ಸಂತುಷ್ಟಿ ಹೊಂದಿದೆ. ಬಿಜೆಪಿ ಮನೆ ಒಡೆದಿದೆ ಆದರೂ ಅವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದಾರೆ. ಬಿಜೆಪಿಯವರು ಆಡಿದ್ದೇ ಆಟ ಎಂಬಂತಿತ್ತು ಇನ್ನು ಅದು ನಡೆಯುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸದಸ್ಯ ಎಂ ಎಸ್ ಮಹಮ್ಮದ್. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ , ಮಾಜಿ ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ನಝೀರ್ ಮಠ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶುಕೂರ್ ಹಾಜಿ , ಮಾಜಿ ಜಿಪಂ ಸದಸ್ಯ ಸೋಮನಾಥ , ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುರಳೀದರ್ ರೈ ಮಠಂತಬೆಟ್ಟು ವಂದಿಸಿದರು.