‘ತಾಕತ್ತಿದ್ದರೆ ನನ್ನ ಸವಾಲು ಸ್ವೀಕರಿಸಿ’: ಸುನಿಲ್ ಕುಮಾರ್‌ಗೆ ಪ್ರಮೋದ್ ಮುತಾಲಿಕ್ ಪಂಥಾಹ್ವಾನ
ಕಾರ್ಕಳ, ಮೇ 16: ಚುನಾವಣಾ ಪ್ರಚಾರ ಮುಗಿದು ಫಲಿತಾಂಶ ಪ್ರಕಟಗೊಳ್ಳುವವರೆಗೆ ಬೂದಿ ಮುಚ್ಚಿದ ಕೆಂಡ ದಂತಿದ್ದ ಗುರು-ಶಿಷ್ಯರಾದ ವಿ.ಸುನಿಲ್ ಕುಮಾರ್ ಹಾಗೂ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನಡುವಿನ ಏಟು-ಎದಿರೇಟು ತಾರಕ್ಕೇರಿದೆ.
ರವಿವಾರ ಇಲ್ಲಿ ನಡೆದ ವಿಜಯೋತ್ಸವ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿ ‘ಪ್ರಮೋದ್ ಮುತಾಲಿಕ್ ಡೀಲ್ ಮಾಸ್ಟರ್’ ಎಂದು ಜರೆದಿದ್ದ ಸುನಿಲ್ ಆರೋಪಕ್ಕೆ ಎದಿರೇಟು ನೀಡಿರುವ ಮುತಾಲಿಕ್ ‘ಸುನಿಲ್, ತಮ್ಮ ನಾಲಿಗೆ ಬಿಗಿ ಹಿಡಿದು ಮಾತನಾಡಿ, ತಾಕತ್ತಿದ್ದರೆ ನನ್ನ ಸವಾಲನ್ನು ಸ್ವೀಕರಿಸಿ’ ಎಂದು ಪಂಥಾಹ್ವಾನ ನೀಡಿದ್ದಾರೆ.
ವಿಜಯೋತ್ಸವ ಸಭೆಯಲ್ಲಿ ಮುತಾಲಿಕ್‌ರನ್ನು ಡೀಲ್ ಮಾಸ್ಟರ್ ಎಂದು ಕರೆದಿದ್ದ ಸುನಿಲ್ ಕುಮಾರ್ ತನ್ನ ವಿರುದ್ಧ ಮಾಡಿದ್ದ ಆರೋಪಕ್ಕೆ ಮಾರಿಗುಡಿಯಲ್ಲಿ ಪ್ರಮಾಣ ಮಾಡಿ ಬಂದಿದ್ದ ಮುತಾಲಿಕ್, ನಾನು ಕೇವಲ ಆರೋಪ ಮಾಡಿಲ್ಲ ದಾಖಲೆ ಬಹಿರಂಗಗೊಳಿಸಿದ್ದೇನೆ ಎಂದು ಹೇಳಿಕೆ ನೀಡಿದ್ದೇನೆ ಎಂದರು.
ಕಾರ್ಕಳದಲ್ಲಿ ನೀವು ಅಭಿವೃದ್ಧಿ ಜೊತೆ ಕಮಿಷನ್ ಮತ್ತು ಕಲೆಕ್ಷನ್ ಕೂಡ ಮಾಡಿದ್ದೀರಿ. ಈಗ ನನ್ನನ್ನು ಡೀಲ್ ಮಾಸ್ಟರ್ ಎಂದು ಕರೆದಿದ್ದೀರಿ... ಹಣ ಗಳಿಸುವ ಉದ್ದೇಶ ಇದ್ದಿದ್ದರೆ ಧಾರವಾಡದಿಂದ ಕಾರ್ಕಳಕ್ಕೆ ಬರಬೇಕಾಗಿರಲಿಲ್ಲ. 48 ವರ್ಷಗಳ ಕಾಲ ಹೋರಾಟ ಮಾಡಬೇಕಾಗಿ ಇರಲಿಲ್ಲ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ನಾನು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ನೀವು ಯಾವುದೇ ಉತ್ತರ ನೀಡಿಲ್ಲ. ಧಾರವಾಡದಿಂದ ಕಾರ್ಕಳಕ್ಕೆ ಬಂದು ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ. ಸುನಿಲ್ ಕುಮಾರ್, ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಕನ್ನಡಿ ಮುಂದೆ ನಿಂತು ಸುನಿಲ್ ಕುಮಾರ್ ಅವಲೋಕನ ಮಾಡಿಕೊಳ್ಳಬೇಕು ಎಂದರು.
ಮಾಜಿ ಸಚಿವ ಈಶ್ವರಪ್ಪ ಇಂಧನ ಇಲಾಖೆ ಭ್ರಷ್ಟಾಚಾರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ್ದರು. ಕಾರ್ಕಳದ ಅಧಿಕಾರಿಗಳು ಕೂಡ ಆರೋಪ ಮಾಡಿದ್ದರು. ನೀವು ಆರೋಪ ಮಾಡಿದ ಬಳಿಕ ಕಾರ್ಕಳದ ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡಿ ಬಂದಿದ್ದೇನೆ. ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡುವ ನೈತಿಕತೆ ನಿಮಗೆ ಇದೆಯಾ? ಎಂದು ಮುತಾಲಿಕ್, ಸುನಿಲ್ ಕುಮಾರ್‌ರನ್ನು ಪ್ರಶ್ನಿಸಿದರು.
ಭ್ರಷ್ಟತೆ, ವಂಚನೆ, ಮೋಸದಿಂದ ಗೆದ್ದಿದ್ದೀರಿ. ನಿಮಗೆ ಅಭಿನಂದನೆಗಳು. ಮತದಾನದಲ್ಲಿ ಸೋತಿರಬಹುದು. ಹೋರಾಟ, ಹಿಂದುತ್ವ, ಸತ್ಯದಲ್ಲಿ ನಾನು ಸೋತಿಲ್ಲ. ನೀವು ನನಗೆ ಬುದ್ಧಿ ಕಲಿಸುವ ಅವಶ್ಯಕತೆ ಇಲ್ಲ. ನನಗೆ ಅದನ್ನು ಆರ್‌ಎಸ್‌ಎಸ್ ಕಲಿಸಿದೆ... ತಾಕತ್ತಿದ್ದರೆ ನನ್ನ ಸವಾಲು ಸ್ವೀಕಾರ ಮಾಡಿ, ಮಾರಿಗುಡಿಗೆ ಹೋಗಿ ಪ್ರಮಾಣ ಮಾಡಿ.. ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧ ಮಾಡಿ ಎಂದು ಮುತಾಲಿಕ್ ಪಂಥಾಹ್ವಾನ ನೀಡಿದರು.