ಉಡುಪಿ: ಮೇ 21ರಿಂದ ಆರಾ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ

ಉಡುಪಿ, ಮೇ 16: ನಗರದ ಕುಂಜಿಬೆಟ್ಟಿನಲ್ಲಿರುವ ಆರಾ ಚಿತ್ರಕಲಾ ಶಾಲೆ ಮತ್ತು ಆರ್ಟ್ ಗ್ಯಾಲರಿ ವತಿಯಿಂದ ಮೇ 21ರಿಂದ 23ರವರೆಗೆ ಮೂರು ದಿನಗಳ ಕಾಲ ಆರಾ ಮೆಗಾ ಆರ್ಟ್ ಶೋ ಎಂಬ ವಿಶೇಷ ಚಿತ್ರಕಲಾ ಪ್ರದರ್ಶನವನ್ನು ಆರಾ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.
ಅರಾ ಚಿತ್ರಕಲಾ ಶಾಲೆಯ ಅಧ್ಯಾಪಕ ಶೈಲೇಶ್ ಕೋಟ್ಯಾನ್ ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ರೋಟರಿ ಕ್ಲಬ್ ಮಣಿಪಾಲ ಇದರ ಅಧ್ಯಕ್ಷೆ ರೇಣು ಜಯರಾಮ್ ಚಿತ್ರಕಲಾ ಪ್ರದರ್ಶನವನ್ನು ಮೇ 21ರ ರವಿವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಅಜ್ಜರಕಾಡಿನ ಜಿ. ಶಂಕರ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾದ ಡಾ.ಎಸ್ ಭಾಸ್ಕರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಆರಾ ಚಿತ್ರಕಲಾ ಶಾಲೆಯ ಅಧ್ಯಾಪಕ ಶೈಲೇಶ್ ಕೋಟ್ಯಾನ್ ಮಾರ್ಗದರ್ಶನದಲ್ಲಿ ಶಾಲೆಯ ಎಂಟು ಮಂದಿ ಯುವ ಕಲಾವಿದರು ರಚಿಸಿದ ಚಿತ್ರಕಲಾ ಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿದೆ. ಕಲಾವಿದರಾದ ಶ್ರೀರಕ್ಷಾ ಕರ್ಕೇರಾ, ಪೂರ್ಣ ಪ್ರಭು, ಲಕ್ಷ್ಮಿ ನಾಯಕ್ ,ನೇಹಾ ಹರೀಶ್, ಪ್ರದ್ನಾ ವಾಲವಲ್ಕರ್, ರಿತಿಕಾ ಉದಯ್, ಪೂರ್ವಿ ಐತಾಳ್ ಮತ್ತು ಪುಲಸ್ತ್ಯ ರಾವ್ ಇವರು ಅಕ್ರೆಲಿಕ್ ಶೈಲಿಯಲ್ಲಿ ರಚಿಸಿದ ಪೈಂಟಿಂಗ್ಸ್‌ಗಳು ಪ್ರದರ್ಶನ ಗೊಳ್ಳಲಿವೆ.
ಚಿತ್ರಕಲಾ ಪ್ರದರ್ಶನ ಮೇ 21ರಿಂದ 23ರವರೆಗೆ ಬೆಳಿಗ್ಗೆ 10:00ರಿಂದ ಸಂಜೆ 6:00ರವರೆಗೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಪೂರ್ಣ ಪ್ರಭು, ಶ್ರೀರಕ್ಷಾ ಕೋಟ್ಯಾನ್, ಲಕ್ಷ್ಮೀ ನಾಯಕ್, ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.







