ಡಿಕೆಶಿಗೆ ರಾಜ್ಯದ ಮುಖ್ಯಮಂತ್ರಿ ಹುದ್ದೆ ನೀಡಿ: ಉಡುಪಿ ಜಿಲ್ಲಾ ಒಕ್ಕಲಿಗ (ಗೌಡ)ರ ಸೇವಾ ಸಂಘ ಆಗ್ರಹ

ಉಡುಪಿ, ಮೇ 16: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವನ್ನು ತಂದು ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಾರಿಯ ರಾಜ್ಯ ಸರಕಾರದ ನೇತೃತ್ವ ನೀಡಬೇಕು ಎಂದು ಉಡುಪಿ ಜಿಲ್ಲಾ ಒಕ್ಕಲಿಗರ (ಗೌಡ) ಸೇವಾ ಸಂಘ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಒತ್ತಾಯಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಸಿದ್ಧರಾಜು, ಡಿಕೆಶಿ ಅವರು ಒಕ್ಕಲಿಗ ಸಮುದಾಯದ ಅತಿದೊಡ್ಡ ನಾಯಕರು ಹಾಗೂ 136 ಸೀಟು ಗೆಲ್ಲುವಲ್ಲಿ ಪ್ರಧಾನ ಕಾರಣರು ಎಂದರು. ಪಕ್ಷದ ಗೆಲುವಿಗಾಗಿ ಡಿಕೆಶಿ ಹಗಲಿರುಳು ದುಡಿದಿದ್ದಾರೆ ಎಂದರು.
ಈ ಬಾರಿ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿ ರಾಜ್ಯಾದ್ಯಂತ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದಾರೆ. ಒಕ್ಕಲಿಗರು ಈ ಬಾರಿ ಜೆಡಿಎಸ್‌ನ್ನು ತೊರೆದು ಕಾಂಗ್ರೆಸ್‌ಗೆ ಒಲಿಯಲು ಡಿಕೆಶಿ ಅವರ ಅವಿರತ ಪ್ರಯತ್ನವೇ ಕಾರಣ ಎಂದರು. ಆದುದರಿಂದ ಈ ಬಾರಿ ಡಿಕೆಶಿ ಅವರಿಗೇ ರಾಜ್ಯದ ಮುಖ್ಯಮಂತ್ರಿ ಪಟ್ಟ ಕಟ್ಟಬೇಕು ಎಂದು ಸಿದ್ಧರಾಜು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಹೇಮಾನಂದ ಹಲ್ದಡ್ಕ, ಕೋಶಾಧಿಕಾರಿ ರಘುನಂದನ್ ಹಾಗೂ ಮಾರ್ಗದರ್ಶಕ ಮಂಜುನಾಥ್ ಉಪಸ್ಥಿತರಿದ್ದರು.







