ಯಕ್ಷಗಾನ ಕಲಾರಂಗದಿಂದ ಮೇ 21ಕ್ಕೆ ತಾಳಮದ್ದಲೆ ಸಪ್ತಾಹ ಪ್ರಾರಂಭ

ಉಡುಪಿ, ಮೇ 16: ಉಡುಪಿಯ ಯಕ್ಷಗಾನ ಕಲಾರಂಗ ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಕರ್ಣಾಟಕ ಬ್ಯಾಂಕ್ ಗಳ ಸಹಯೋಗದಲ್ಲಿ ಪ್ರತಿವರ್ಷ ನಡೆಸುತ್ತಾ ಬಂದ ತಾಳಮದ್ದಲೆ ಸಪ್ತಾಹವನ್ನು ಈ ಬಾರಿ ಮೇ 21ರಿಂದ ಮೇ 27ರವರೆಗೆ ಆಯೋಜಿಸಲಿದೆ.
ಮೇ 21 ಮತ್ತು 22ರಂದು ಪರ್ಕಳದ ಶ್ರೀವಿಘ್ನೇಶ್ವರ ಸಭಾಭವನದಲ್ಲಿ ಅನುಕ್ರಮವಾಗಿ ಭೀಷ್ಮಾರ್ಜುನ ಮತ್ತು ಅತಿಕಾಯ ಕಾಳಗ, ಮೇ 23 ಮತ್ತು 24ರಂದು ಬನ್ನಂಜೆಯ ಶ್ರೀಶಿವಗಿರಿ ಸಭಾಭವನದಲ್ಲಿ ಕ್ರಮವಾಗಿ ವಾಮನ ಚರಿತ್ರೆ ಮತ್ತು ಸುಧನ್ವಾರ್ಜುನ, ಮೇ 25ಮತ್ತು 26ರಂದು ಮಲ್ಪೆಯ ಬಾಲಕರ ಶ್ರೀರಾಮ ಭಜನಾ ಮಂದಿರದಲ್ಲಿ ಕ್ರಮವಾಗಿ ಕರ್ಣಾರ್ಜುನ ಮತ್ತು ಕಚ ದೇವಯಾನಿ ತಾಳಮದ್ದಲೆ ನಡೆಯಲಿದೆ.
ಮೇ 27ರಂದು ಶಿರ್ವದ ಮಹಿಳಾ ಸೌಧದಲ್ಲಿ ಶ್ರೀಕೃಷ್ಣಸಂಧಾನ ತಾಳಮದ್ದಲೆ ನಡೆಯಲಿದೆ. ಅಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ಅಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಮಟ್ಟಿ ಮುರಲೀಧರರಾವ್ ಹಾಗೂ ಪಂಡಿತ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಗಳನ್ನು ಕ್ರಮವಾಗಿ ಶ್ರೀಕರ ಭಟ್ ಮತ್ತು ಡಾ.ಪಾದೇಕಲ್ಲು ವಿಷ್ಣು ಭಟ್ ಇವರಿಗೆ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.





