ಬೆಲೆ ಏರಿಕೆ, ಕಾಂಗ್ರೆಸ್‍ನ 5 'ಗ್ಯಾರಂಟಿ'ಗಳೇ ಬಿಜೆಪಿ ಸೋಲಿಗೆ ಕಾರಣ: ಮಾಜಿ ಶಾಸಕ ಎಲ್.ನಾಗೇಂದ್ರ

ಮೈಸೂರು,ಮೇ.16: ಬಿಜೆಪಿ ಸೋಲಿಗೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಘೋಷಣೆಗಳು ಕಾರಣವಾಗಿದೆ ಎಂದು ಮೈಸೂರು ನಗರದ ಚಾಮರಾಜ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿ ಮಾತನಡಿದ ಅವರು, ಬಿಜೆಪಿ ಪಕ್ಷ ಸೋಲಿಗೆ ಕಾಂಗ್ರೆಸ್ ನವರು ನೀಡಿದ 5 ಗ್ಯಾರೆಂಟಿಗಳು ಕಾರಣ, ಇದರ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ಬಿಜೆಪಿ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಇನ್ಯಾವ ಅಂಶಗಳು ಸೋಲಿಗೆ ಕಾರಣವಾಗಿದೆ ಎಂಬುದರ ಬಗ್ಗೆ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ಜನತೆ ನನಗೆ ಕಳೆದ ಬಾರಿಗಿಂತಲೂ 17 ಸಾವಿರಕ್ಕೂ ಹೆಚ್ಚುಮತಗಳನ್ನು ನೀಡಿದ್ದಾರೆ. ಆದರೂ ನಾನು ಸೋಲಬೇಕಾಯಿತು. ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರು 20 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಕೇವಲ 4.5 ಸಾವಿರ ಮತಗಳನ್ನು ಪಡೆದದ್ದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದರು.
ನಾನು ಸುಮಾರು 900 ಕೋಟಿ ರೂ.ಗಳಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ದುಡಿದಿದ್ದೇನೆ. ಈ ಯೋಜನೆಗಳ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ನೂತನ ಶಾಸಕ ಕೆ.ಹರೀಶ್ ಗೌಡ ಅದೆಲ್ಲವನ್ನು ಮುಂದುವರೆಸಿಕೊಂಡು ಹೋಗಲಿ. ನಾನು ಅವರಿಗೆ ಬೇಕಾದ ಎಲ್ಲಾ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಈಗಾಗಲೇ ಚಾಮರಾಜ ಕ್ಷೇತ್ರದಲ್ಲಿ ಹುಕ್ಕಾ ಬಾರ್ ಗಳು ತಲೆ ಎತ್ತುತ್ತಿವೆ. ಹುಕ್ಕಾ, ಬಾರ್, ಕ್ಲಬ್‍ಗಳ ಮಾಲೀಕರ ನೆರವಿನಿಂದಲೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಜನ ನೆಮ್ಮದಿಯಿಂದ ಬದುಕ ಬೇಕಾದರೆ ಹುಕ್ಕಾ ಬಾರ್ ನಂತಹುಗಳನ್ನು ಪೊಲೀಸರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಬ್ರಮಣ್ಯ, ನಗರಪಾಲಿಕೆ ಸದಸ್ಯೆ ವೇದಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







