ಜ್ಞಾನವಾಪಿ ಮಸೀದಿ ಪ್ರಕರಣ: ‘ಶಿವಲಿಂಗ’ದ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ

ಹೊಸದಿಲ್ಲಿ,ಮೇ 16: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ, ಹಿಂದು ವಾದಿಗಳು ಶಿವಲಿಂಗ ಎಂದು ಪ್ರತಿಪಾದಿಸಿರುವ ಅಂಡಾಕಾರದ ವಸ್ತುವಿನ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಬಹುದು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಕಳೆದ ವಾರ ಎತ್ತಿ ಹಿಡಿದಿದೆ.
ಅಂಡಾಕಾರದ ವಸ್ತುವಿನ ವಯಸ್ಸನ್ನು ನಿರ್ಧರಿಸಲು ಅದನ್ನು ಕಾರ್ಬನ್ ಡೇಟಿಂಗ್‌ಗೆ ಒಳಪಡಿಸಲು ಅವಕಾಶವನ್ನು ನಿರಾಕರಿಸಿದ್ದ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಮೇ 12ರಂದು ಉಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ. ಉಚ್ಚ ನ್ಯಾಯಾಲಯದ ವಿವರವಾದ ಆದೇಶವನ್ನು ಸೋಮವಾರ ಸಾರ್ವಜನಿಕವಾಗಿ ಲಭ್ಯವಾಗಿಸಲಾಗಿದೆ.
ಮಸೀದಿಯಲ್ಲಿ ಶೃಂಗಾರ ಗೌರಿಯ ಚಿತ್ರವಿದೆ ಎಂದು ಪ್ರತಿಪಾದಿಸಿರುವ ಐವರು ಹಿಂದು ಮಹಿಳೆಯರು ಅದನ್ನು ಪೂಜಿಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗೆ ವಿಷಯವು ಸಂಬಂಧಿಸಿದೆ.
ಕಳೆದ ವರ್ಷದ ಮೇ ತಿಂಗಳಿನಲ್ಲಿ ವಾರಣಾಸಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಮಸೀದಿಯ ಸಮೀಕ್ಷೆ ಸಂದರ್ಭದಲ್ಲಿ ಅಂಡಾಕಾರದ ವಸ್ತುವು ಪತ್ತೆಯಾಗಿತ್ತು. ಅದು ಶಿವಲಿಂಗವಾಗಿದೆ ಎಂದು ಹಿಂದು ಕಕ್ಷಿದಾರರು ಪ್ರತಿಪಾದಿಸಿದ್ದರು,ಆದರೆ ಮಸೀದಿಯ ಉಸ್ತುವಾರಿ ಸಮಿತಿಯು ಅದು ವಝು ಖಾನಾದಲ್ಲಿಯ ನಿಷ್ಕ್ರಿಯ ಕಾರಂಜಿಯಾಗಿದೆ ಎಂದು ವಾದಿಸಿತ್ತು.
ಅಂಡಾಕಾರದ ವಸ್ತುವಿನ ಕಾರ್ಬನ್ ಡೇಟಿಂಗ್ ಕೋರಿ ಹಿಂದು ಕಕ್ಷಿದಾರರು ಸಲ್ಲಿಸಿದ್ದ ಅರ್ಜಿಯನ್ನು ಅಕ್ಟೋಬರ್‌ನಲ್ಲಿ ತಿರಸ್ಕರಿಸಿದ್ದ ವಾರಣಾಸಿ ಜಿಲ್ಲಾ ನ್ಯಾಯಾಲಯವು, ಮಸೀದಿಯ ಆವರಣದೊಳಗೆ ಯಾವುದೇ ರೀತಿಯ ಸಮೀಕ್ಷೆಯು ಪ್ರದೇಶವನ್ನು ರಕ್ಷಿಸಲು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಹೇಳಿತ್ತು.
ವಸ್ತುವಿಗೆ ಯಾವುದೇ ಹಾನಿಯನ್ನುಂಟು ಮಾಡದೇ ಅದರ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಬಹುದು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಈಗ ಎತ್ತಿ ಹಿಡಿದಿದೆ. ಪುರಾತತ್ವ ಸರ್ವೇಕ್ಷಣೆಯ ವರದಿಯನ್ನು ಆಧರಿಸಿ ನ್ಯಾಯಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ನ್ಯಾ.ಅರವಿಂದ ಕುಮಾರ ಮಿಶ್ರಾ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ಪುರಾತತ್ವ ಇಲಾಖೆಯ ಮಾರ್ಗದರ್ಶನದೊಂದಿಗೆ ತನಿಖೆಯನ್ನು ನಡೆಸುವಂತೆ ಅವರು ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡಿದ್ದಾರೆ.







