ಬಿಜೆಪಿ ಮಧ್ಯಪ್ರದೇಶದಲ್ಲಿ ಉದ್ಯಮ ನಡೆಸುತ್ತಿದೆ, ಸರಕಾರವಲ್ಲ: ದಿಗ್ವಿಜಯ ಸಿಂಗ್

ಜಬಲ್ಪುರ (ಮಧ್ಯಪ್ರದೇಶ), ಮೇ 16: ಭಾರತೀಯ ಜನತಾ ಪಕ್ಷವು ಮಧ್ಯಪ್ರದೇಶದಲ್ಲಿ ಉದ್ಯಮವನ್ನು ನಡೆಸುತ್ತಿದೆ, ಅದು ಸರಕಾರ ನಡೆಸುತ್ತಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ. ಸೋಮವಾರ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ, ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
‘‘ಮಧ್ಯಪ್ರದೇಶ ಸರಕಾರವು ಸರಕಾರ ನಡೆಸುತ್ತಿಲ್ಲ, ಅದು ಖಾಸಗಿ ಉದ್ದಿಮೆ ನಡೆಸುತ್ತಿದೆ. ಈ ಖಾಸಗಿ ಉದ್ಯಮದ ಮಾಲೀಕ ಯಾರು? ಇದು ಯಾರ ಭಾಗೀದಾರಿಕೆಯ ಕಂಪೆನಿ. ಇದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ಸಂಪುಟ ಸದಸ್ಯರ ಉದ್ಯಮವಾಗಿದೆ. ಕೆಲವು ಹೊಸ ಶೇರುದಾರರು ಈ ಕಂಪೆನಿಗೆ ಬಂದಿದ್ದಾರೆ. ಅವರನ್ನು ಮಹಾರಾಜ ಬಿಜೆಪಿ (ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ) ಎಂದು ಕರೆಯುತ್ತಾರೆ’’ ಎಂದು ದಿಗ್ವಿಜಯ ಸಿಂಗ್ ಹೇಳಿದರು.
‘‘ಬಿಜೆಪಿಯವರು ರಾಜ್ಯದಲ್ಲಿ ಮರಳು ಗುತ್ತಿಗೆ ಮತ್ತು ಗಣಿ ಗುತ್ತಿಗೆಗಳನ್ನು ಹೊಂದಿದ್ದಾರೆ. ಜಬಲ್ಪುರದ ಪನಗರ್ ಕ್ಷೇತ್ರದ ಶಾಸಕಿ ಇಂದು ತಿವಾರಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯ ಸಂಪೂರ್ಣ ಉದ್ಯಮವನ್ನು ನಡೆಸುತ್ತಿದ್ದಾರೆ. ಬಡವರಿಗೆ ಲಭ್ಯವಿರುವ 50-60 ಶೇಕಡ ಆಹಾರ ಧಾನ್ಯಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ’’ ಎಂದು ಸಿಂಗ್ ಆರೋಪಿಸಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ. ಅವರ ಮನೆಗಳನ್ನು ಕೆಡವಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.







